ಹುಬ್ಬಳ್ಳಿ: ಹುಬ್ಬಳ್ಳಿ -ಅಂಕೋಲಾ ರೈಲು ಮಾರ್ಗ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮೂರು ದಶಕಗಳ ಕಾಲ ನಡೆದ ಹೋರಾಟಕ್ಕೆ ಫಲ ಸಿಕ್ಕಿದೆ.
ಈ ಮೂಲಕ ದಶಕಗಳ ಕನಸು ಈಡೇರಿದಂತಾಗಿದೆ. 17,000 ಕೋಟಿ ರೂ. ವೆಚ್ಚದ ಈ ಯೋಜನೆ ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸಲಿದೆ. ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗಿದ್ದು, ಯೋಜನೆಯನ್ನು ಪರಿಷ್ಕರಿಸಲಾಗಿದೆ. ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಈ ಯೋಜನೆಯಿಂದ ಉತ್ತೇಜನ ಸಿಗಲಿದೆ ಎಂದು ಹೇಳಲಾಗಿದೆ.
ಹುಬ್ಬಳ್ಳಿ -ಅಂಕೋಲಾ ರೈಲು ಮಾರ್ಗ ಯೋಜನೆಗೆ ಕೊನೆಗೂ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. 1999ರಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಹುಬ್ಬಳ್ಳಿಯಿಂದ ಕಲಘಟಗಿವರೆಗೆ ಸುಮಾರು 34 ಕಿಲೋಮೀಟರ್ ಮಾರ್ಗ ನಿರ್ಮಾಣ ಮಾಡಲಾಗಿತ್ತು. ಆದರೆ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮರಗಳ ಕಡಿತಲೆ ಆಗುತ್ತದೆ ಎಂದು ಪರಿಸರವಾದಿಗಳ ಹೋರಾಟದಿಂದ ಯೋಜನೆ ಸ್ಥಗಿತವಾಗಿತ್ತು.
ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದು ಯೋಜನೆಗೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಆಗ 494 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ಹೇಳಲಾಗಿತ್ತು. ಇತ್ತೀಚೆಗೆ ನೈರುತ್ಯ ರೈಲ್ವೆ 17,147 ಕೋಟಿ ರೂಪಾಯಿ ವೆಚ್ಚದ ಪರಿಷ್ಕೃತ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿ ರೈಲ್ವೆ ಮಂಡಳಿಗೆ ಸಲ್ಲಿಸಿತ್ತು. ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಯೋಜನೆಗೆ ಅನುಮತಿ ನೀಡಿದ್ದಾರೆ.