ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ನಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ನಟಿ ರಮ್ಯಾ ಪೋಸ್ಟ್ ಮಾಡಿದ್ದ ಬೆನ್ನಲ್ಲೇ ನಟಿ ರಮ್ಯಾ ವಿರುದ್ಧ ತಿರುಗಿ ಬಿದ್ದಿರುವ ದರ್ಶನ್ ಫ್ಯಾನ್ಸ್ ರಮ್ಯಾ ವಿರುದ್ಧ ಅಶ್ಲೀಲ ಮೆಸೇಜ್ ಕಳಿಸುವುದು, ಪೋಸ್ಟ್ ಹಾಕುವುದು ಆರಂಭಿಸಿದ್ದಾರೆ. ಇದರಿಂದ ದರ್ಶನ್ ಫ್ಯಾನ್ಸ್ ವಿರುದ್ಧ ಕಿಡಿಕಾರಿರುವ ನಟಿ ರಮ್ಯಾ ಸೈಬರ್ ಕ್ರೈಂಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗುದೆ.
ಅಲ್ಲದೇ ದರ್ಶನ್ ಫ್ಯಾನ್ಸ್ ತನಗೆ ಕಳುಹಿಸಿರುವ ಅಶ್ಲೀಲ ಸಂದೇಶ, ಕೆಟ್ಟ ಕಮೆಂಟ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ನಟಿ ರಮ್ಯಾ, ರೇಣುಕಾಸ್ವಾಮಿಗೂ ದರ್ಶನ್ ಫ್ಯಾನ್ಸ್ ನಡೆದುಕೊಳ್ಳುತ್ತಿರುವ ರೀತಿಗೂ ಯಾವುದೇ ವ್ಯತ್ಯಾಸವಿಲ್ಲ. ರೇಣುಕಾಸ್ವಾಮಿ ಮಾಡಿದ್ದು ತಪ್ಪು ಎಂದ ಮೇಲೆ ಈಗ ದರ್ಶನ್ ಫ್ಯಾನ್ಸ್ ಮಾಡುತ್ತಿರುವುದು ತಪ್ಪಲ್ಲವೇ? ದರ್ಶನ್ ಫ್ಯಾನ್ಸ್ ಬೇರೆ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಸಂದೇಶ ಕಳುಹಿಸಿದರೆ ಅದು ಸರಿಯೇ? ತಪ್ಪು ಯಾರೇ ಮಾಡಿದರೂ ತಪ್ಪು ಇದರ ವಿರುದ್ಧ ಹೋರಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಎಲ್ಲಾ ಬೆಳವಣಿಗೆ ನಡುವೆ ಇದೀಗ ನಟಿ ರಕ್ಷಿತಾ ಮಾಡಿರುವ ಪೋಸ್ಟ್ ಗಮನ ಸೆಳೆಯುತ್ತಿದೆ. ನಟಿ ರಕ್ಷಿತಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಕೆಲ ಇಂಗ್ಲೀಷ್ ಸಾಲುಗಳನ್ನು ಪೋಸ್ಟ್ ಮಾಡಿದ್ದಾರೆ. ‘ನಿಮಗೆ ವ್ಯಕ್ತಿಗಳ ಮಾನಸಿಕ ಆರೋಗ್ಯ ನೋಡಲು ಸಾಧ್ಯವಿಲ್ಲ ಹಾಗಾಗಿ ಯಾವಾಗಲೂ ದಯೆಯಿಂದ ಇರಿ’ ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ ಮತ್ತೊಂದು ಪೋಸ್ಟ್ ನಲ್ಲಿ ‘ನಾನು ನಿಜವಾಗಿಯೂ ಏನು ವೈರಲ್ ಆಗಬೇಕೆಂದು ಬಯಸುತ್ತೇನೆ ನಿಮಗೆ ಗೊತ್ತಾ? ಕನಿಷ್ಠ ಸಭ್ಯತೆ ಇರಲಿ’ ಎಂಂದು ಬರೆದುಕೊಂಡಿದ್ದಾರೆ.