ಚಿತ್ರದುರ್ಗ: ದಾವಣಗೆರೆಯಲ್ಲಿ ನಡೆದ ಪಂಚಪೀಠಾಧೀಶ್ವರರ ಶೃಂಗಸಭೆಯಲ್ಲಿ ಲಿಂಗಾಯತ ಸಮಾಜ ಒಡೆಯುವ ಮಾತು ಕೇಳಿ ಬಂದಿದೆ ಎಮದು ಸಾಣೆಹಳ್ಳಿ ತರಳಬಾಳು ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದ್ದಾರೆ.
ದಾವಣಗೆರೆಯ ಶೃಂಗಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದಲ್ಲಿ ಮಾತನಾಡಿದ ಶ್ರೀಗಳು, ಶೃಂಗಸಭೆಯಲ್ಲಿ ಲಿಂಗಾಯಿತ ಸಮಾಜ ಒಡೆಯುವ ಮಾತು ಕೇಳಿ ಬಂದಿದೆ. ಲಿಂಗಾಯಿತ ಸಮುದಾಯವನ್ನು ಕಟ್ಟುವ ಮಾತುಗಳನ್ನಾಡಿಲ್ಲ. ಶೃಂಗಸಭೆಯಲ್ಲಿ ಬಸವಣ್ಣನವರ ಭಾವಚಿತ್ರ ಹಾಕಿರಲಿಲ್ಲ. ಬಸವಣ್ಣನವರ ತತ್ವಗಳನ್ನು ಪಂಚಪೀಠಾಧೀಶರು ಹೇಳುತ್ತಿಲ್ಲ. ಬಸವಣ್ಣ ಭಕ್ತ ಎಂದು ಪಂಚಪೀಠಾಧೀಶರು ಹೇಳುತ್ತಿದ್ದಾರೆ. ಬಸವಣ್ಣ ಲಿಂಗಾಯತ ಧರ್ಮಗುರು ಎಂದು ಇವರು ಒಪ್ಪುತ್ತಿಲ್ಲ ಅಂತವರ ಜೊತೆಗೆ ಹೇಗೆ ಪ್ರೀತಿ ವಿಶ್ವಾಸ ಬೆಳೆಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಮಠ ಒಡೆಯುವ ಕೆಲಸ ಬೇಡ, ಕಟ್ಟುವ ಕೆಲಸ ಮಾಡಬೇಕು. ನಾವೆಲ್ಲರೂ ಒಂದಾದರೆ ಸಮುದಾಯ ಕಟ್ಟಲು ಸಾಧ್ಯವಿದೆ. ಸಂಕುಚಿತ ಮನೋಭಾವನೆ ಬಿಟ್ಟು ವಿಶಾಲ ಮನೋಭಾವ ಬೆಳೆಸಿಕೊಳ್ಳಿ ಎಂದು ಪಂಚಪೀಠಾಧಿಪತಿಗಳಿಗೆ ಸಾಣೆಹಳ್ಳಿ ಪಂಡಿತರಾಧ್ಯ ಶ್ರೀ ಮನವಿ ಮಾಡಿದ್ದಾರೆ.