ಕಿನ್ಶಾಸಾ(ಕಾಂಗೋ): ಪೂರ್ವ ಕಾಂಗೋದಲ್ಲಿನ ಚರ್ಚ್ ಆವರಣದಲ್ಲಿ ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಬಂಡುಕೋರರು ಭಾನುವಾರ ನಡೆಸಿದ ದಾಳಿಯಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ.
ಪೂರ್ವ ಕಾಂಗೋದ ಕೊಮಾಂಡಾದಲ್ಲಿರುವ ಕ್ಯಾಥೋಲಿಕ್ ಚರ್ಚ್ ಆವರಣದೊಳಗೆ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಅಲೈಡ್ ಡೆಮಾಕ್ರಟಿಕ್ ಫೋರ್ಸ್ (ಎಡಿಎಫ್) ಸದಸ್ಯರು ಈ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಹಲವಾರು ಮನೆಗಳು ಮತ್ತು ಅಂಗಡಿಗಳು ಸಹ ಸುಟ್ಟುಹೋಗಿವೆ.
21 ಕ್ಕೂ ಹೆಚ್ಚು ಜನ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. ನಾವು ಕನಿಷ್ಠ ಮೂರು ಸುಟ್ಟ ದೇಹಗಳನ್ನು ಮತ್ತು ಹಲವಾರು ಮನೆಗಳನ್ನು ಸುಟ್ಟುಹಾಕಿರುವುದನ್ನು ದಾಖಲಿಸಿದ್ದೇವೆ. ಆದರೆ ಹುಡುಕಾಟ ಮುಂದುವರೆದಿದೆ ಎಂದು ಕೊಮ್ನಾಡಾದ ನಾಗರಿಕ ಸಮಾಜದ ಸಂಯೋಜಕರಾದ ಡಿಯುಡೋನ್ ಡುರಾಂತಬೊ ತಿಳಿಸಿದ್ದಾರೆ.
ಕೊಮಾಂಡಾ ಇರುವ ಇಟುರಿ ಪ್ರಾಂತ್ಯದಲ್ಲಿ ಕಾಂಗೋಲೀಸ್ ಸೇನೆಯ ವಕ್ತಾರರು 10 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ.
ಇಂದು ಬೆಳಿಗ್ಗೆ ಕೊಮಾಂಡಾದಿಂದ ಸ್ವಲ್ಪ ದೂರದಲ್ಲಿರುವ ಚರ್ಚ್‌ಗೆ ಮಚ್ಚಿನಿಂದ ಶಸ್ತ್ರಸಜ್ಜಿತ ವ್ಯಕ್ತಿಗಳು ಒಳನುಗ್ಗಿದ್ದಾರೆ, ಅಲ್ಲಿ ಸುಮಾರು 10 ಜನರು ಸಾವನ್ನಪ್ಪಿದ್ದಾರೆ. ಹತ್ಯಾಕಾಂಡ ನಡೆಸಿ ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಿದರು ಎಂದು ಇಟುರಿಯಲ್ಲಿರುವ ಡಿಆರ್‌ಸಿ ಸೇನೆಯ ವಕ್ತಾರ ಲೆಫ್ಟಿನೆಂಟ್ ಜೂಲ್ಸ್ ನ್ಗೊಂಗೊ ಹೇಳಿದ್ದಾರೆ.
ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಸಂಬಂಧ ಹೊಂದಿರುವ ಎಡಿಎಫ್, ಉಗಾಂಡಾ ಮತ್ತು ಡಿಆರ್‌ಸಿ ನಡುವಿನ ಗಡಿಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಬಂಡಾಯ ಗುಂಪಾಗಿದ್ದು, ಒಂದು ದಶಕಕ್ಕೂ ಹೆಚ್ಚು ಕಾಲ ನಾಗರಿಕರ ವಿರುದ್ಧ ದಾಳಿಗಳನ್ನು ನಡೆಸುತ್ತಿದೆ.