ಬೆಂಗಳೂರು: ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ನಾಳೆ ರಾಜ್ಯಾದ್ಯಂತ ಹೋರಾಟ ಕೈಗೊಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ರಸಗೊಬ್ಬರ ಕೊರತೆಗೆ ಕಳ್ಳ ದಂಧೆ ಕಾರಣ. ನಾಳೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರು ಹೊರತುಪಡಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ಕೈಗೊಳ್ಳಲಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರಸಗೊಬ್ಬರಕ್ಕೆ ಅನುದಾನವನ್ನು ಕಾಯ್ದಿರಿಸುತ್ತಿದ್ದರು. ಈ ಸರ್ಕಾರ ದಾಸ್ತಾನು ಅನುದಾನ ಕಡಿತ ಮಾಡಿದೆ. ಒಂದು ಸಾವಿರ ಕೋಟಿ ದಾಸ್ತಾನು ಅನುದಾನವನ್ನು 400 ಕೋಟಿ ರೂ.ಗೆ ಕಡಿತ ಮಾಡಿದೆ ಎಂದು ಆರೋಪಿಸಿದ್ದಾರೆ.
ಈ ಬಾರಿ ಒಂದು ತಿಂಗಳು ಮೊದಲೇ ಮುಂಗಾರು ಆರಂಭವಾಗಿದ್ದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಮೊದಲೇ ಸಿದ್ಧತೆ ಮಾಡಿಕೊಳ್ಳಲಿಲ್ಲ. ಕೇಂದ್ರಕ್ಕೆ ಮೊದಲೇ ಕೇಂದ್ರಕ್ಕೆ ಪತ್ರ ಬರೆಯಬೇಕಿತ್ತು. ಈಗ ಪತ್ರ ಬರೆಯುವುದಲ್ಲ ರಾಜ್ಯ ಸರ್ಕಾರ ರೈತರನ್ನು ಬೀದಿಗೆ ತಂದಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಬಂದ 8 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಏನಾಯ್ತು? ರಾಜ್ಯದಲ್ಲಿ ರಸಗೊಬ್ಬರ ಕಳ್ಳದಂಧೆ ನಡೆಯುತ್ತಿದೆ. ಕೃತಕ ಅಭಾವ ಸೃಷ್ಟಿಸಲಾಗಿದೆ. ರಸಗೊಬ್ಬರ ಅಭಾವ, ನಕಲಿ ಬೀಜಗಳಿಗೆ ಸರ್ಕಾರವೇ ಹೊಣೆ ಎಂದು ಹೇಳಿದ್ದಾರೆ.