ಹಾಸನ: ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಬೆಂಬಲಿಗರು ಘೋಷಣೆ ಕೂಗಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕೋಡಿಮಠದ ಬಳಿ ಘಟನೆ ನಡೆದಿದೆ.
ಕೋಡಿಮಠದ ಸ್ವಾಮೀಜಿಯೊಂದಿಗೆ ಚರ್ಚಿಸಿ ಡಿ.ಕೆ. ಶಿವಕುಮಾರ್ ಹೊರಬಂದ ಸಂದರ್ಭದಲ್ಲಿ ಬೆಂಬಲಿಗರು ಘೋಷಣೆ ಕೂಗಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವಾಮೀಜಿ ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ತಾಳೆಗರಿ ಭವಿಷ್ಯ ಕೇಳಿ ಹೊರಬರುತ್ತಿದ್ದಂತೆ ಬೆಂಬಲಿಗರಿಂದ ಘೋಷಣೆ ಮೊಳಗಿದೆ. ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಗೆ ಜೈ ಎಂದು ಬೆಂಬಲಿಗರು ಘೋಷಣೆ ಕೂಗಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಯಾವ ಅಧಿಕಾರಿನೂ ಭೇಟಿ ಮಾಡಿಲ್ಲ, ನಮ್ಮದೇ ಸರ್ಕಾರ ಇದೆ ಏನಾದರೂ ಇದ್ದರೆ ನಮಗೆ ಹೇಳುತ್ತಾರೆ. ನಮ್ಮ ಸರ್ಕಾರದ್ದು ಏನಾದರೂ ತಪ್ಪುಗಳಿದ್ದರೆ ತಿದ್ದಿಕೊಳ್ಳುತ್ತೇವೆ. ಸುರ್ಜೇವಾಲಾ ಅವರಾಗಲೀ, ಖರ್ಗೆಯವರಾಗಲಿ ಈವರೆಗೂ ಒಬ್ಬ ಅಧಿಕಾರಿಗೂ ಕರೆ ಮಾಡಿಲ್ಲ, ಮಾಡೋದಿಲ್ಲ ಎಂದು ಹೇಳಿದ್ದಾರೆ.
ಸುರ್ಜೇವಾಲಾ ಅಧಿಕಾರಿಗಳ ಸಭೆ ನಡೆಸಿದ ಬಗ್ಗೆ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ, ದೊಡ್ಡವರ ಬಗ್ಗೆ ನಾನು ಮಾತನಾಡುವುದಿಲ್ಲ. ರಾಜಣ್ಣ ಮಾತಿಗೆ ಮುಖ್ಯಮಂತ್ರಿಗಳು ಉತ್ತರ ನೀಡಿದ್ದಾರೆ. ಸಿಎಂ ಉತ್ತರ ಕೊಟ್ಟ ಮೇಲೆ ನಾನೇನು ಉತ್ತರ ಕೊಡೋದು. ಮುಖ್ಯಮಂತ್ರಿಗಳಿಗೆ ನನಗಿಂತ ಹೆಚ್ಚಿನ ಮಾಹಿತಿ ಇರುತ್ತದೆ ಎಂದಿದ್ದಾರೆ.