ಬೆಂಗಳೂರು: ತಮಿಳುನಾಡಿನ ವೇಲಂಕಣಿಯಲ್ಲಿ ಆಗಸ್ಟ್ 29 ರಿಂದ ಸೆಪ್ಟೆಂಬರ್ 8 ರವರೆಗೆ ವಾರ್ಷಿಕ ಜಾತ್ರೆ ನಡೆಯಲಿದ್ದು, ಈ ಜಾತ್ರೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆ ಕಲ್ಪಿಸಿದೆ.
ಪ್ರತಿ ವರ್ಷ ಕರ್ನಾಟಕ, ಗೋವಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಜಾತ್ರೆಗೆ ತೆರಳುತ್ತಾರೆ. ಈ ಹಿನ್ನೆಲೆಯಲ್ಲಿ ಜನದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಗೋವಾದ ವಾಸ್ಕೋ-ಡ-ಗಾಮಾದಿಂದ ತಮಿಳುನಾಡಿನ ವೇಲಂಕಣಿವರೆಗೆ ಮತ್ತು ವೇಲಂಕಣಿಯಿಂದ ವಾಸ್ಕೋ-ಡ-ಗಾಮಾವರೆಗೆ ಪ್ರತಿ ದಿಕ್ಕಿನಲ್ಲಿ ತಲಾ ಮೂರು ಟ್ರಿಪ್ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 07361 ವಾಸ್ಕೋ-ಡ-ಗಾಮಾ – ವೇಲಂಕಣಿ ವಿಶೇಷ ಎಕ್ಸ್ ಪ್ರೆಸ್ ವಾಸ್ಕೋ-ಡ-ಗಾಮಾದಿಂದ ಆಗಸ್ಟ್ 27, ಸೆಪ್ಟೆಂಬರ್ 1 ಮತ್ತು 6, 2025 ರಂದು (ಬುಧವಾರ, ಸೋಮವಾರ ಮತ್ತು ಶನಿವಾರ) ರಾತ್ರಿ 9:55ಕ್ಕೆ ಹೊರಟು, ಆಯಾ ದಿನಗಳಲ್ಲಿ (ಶುಕ್ರವಾರ, ಬುಧವಾರ ಮತ್ತು ಸೋಮವಾರ) ಬೆಳಗಿನ ಜಾವ 3:45ಕ್ಕೆ ವೇಲಂಕಣಿ ತಲುಪಲಿದೆ.
ಮರಳಿ ರೈಲು ಸಂಖ್ಯೆ 07362 ವೇಲಂಕಣಿ – ವಾಸ್ಕೋ-ಡ-ಗಾಮಾ ವಿಶೇಷ ಎಕ್ಸ್ ಪ್ರೆಸ್ ವೇಲಂಕಣಿಯಿಂದ ಆಗಸ್ಟ್ 29, ಸೆಪ್ಟೆಂಬರ್ 3 ಮತ್ತು 8, 2025 ರಂದು (ಶುಕ್ರವಾರ, ಬುಧವಾರ ಮತ್ತು ಸೋಮವಾರ) ರಾತ್ರಿ 11:55 ಕ್ಕೆ ಹೊರಟು, ಆಯಾ ದಿನಗಳಲ್ಲಿ (ಭಾನುವಾರ, ಶುಕ್ರವಾರ ಮತ್ತು ಬುಧವಾರ) ಬೆಳಗಿನ ಜಾವ 3:00 ಗಂಟೆಗೆ ವಾಸ್ಕೋ-ಡ-ಗಾಮಾ ತಲುಪಲಿದೆ.
ಈ ವಿಶೇಷ ರೈಲುಗಳು ಎರಡೂ ಮಾರ್ಗಗಳಲ್ಲಿ ಮಡಗಾಂವ್, ಸ್ಯಾನ್’ವೊರ್ಡೆಮ್, ಕುಳೆಂ, ಕ್ಯಾಸಲ್ ರಾಕ್, ಲೋಂಡಾ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಎಸ್ಎಂಎಂ ಹಾವೇರಿ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು, ಎಸ್ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಮೊರಪ್ಪೂರು, ಬೊಮ್ಮಿಡಿ, ಸೇಲಂ, ನಾಮಕ್ಕಲ್, ಕರೂರು, ಕುಳಿತಲೈ, ತಿರುಚ್ಚಿರಾಪಳ್ಳಿ, ತಂಜಾವೂರು, ನಿಡಾಮಂಗಲಂ, ತಿರುವಾರೂರು ಮತ್ತು ನಾಗಪಟ್ಟಿಣಂ ನಿಲ್ದಾಣಗಳಲ್ಲಿ ನಿಲ್ಲಲಿವೆ.
ಈ ವಿಶೇಷ ರೈಲುಗಳು 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 2 ಎಸಿ 3-ಟೈರ್, 11 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್ಎಲ್ಆರ್/ಡಿ ಬೋಗಿಗಳು ಸೇರಿದಂತೆ ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ.
ಹೆಚ್ಚಿನ ಮಾಹಿತಿ ಮತ್ತು ಟಿಕೆಟ್ ಕಾಯ್ದಿರಿಸಲು ಪ್ರಯಾಣಿಕರು ಭಾರತೀಯ ರೈಲ್ವೆ ವೆಬ್ ಸೈಟ್ ಗೆ ಭೇಟಿ ನೀಡಬಹುದು. ಪ್ರಯಾಣಿಕರು ಈ ವಿಶೇಷ ರೈಲು ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೋರಿದೆ.