ನೌಕರರ ರಾಜ್ಯ ನಿಗಮ(ಇಎಸ್ಐಸಿ)ವು ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಮೂಲಕ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸಲು ಎಸ್ಪಿಆರ್ಇಇ 2025 ಯೋಜನೆಯನ್ನು ಪ್ರಾರಂಭಿಸಿದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ.ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ಹಿಚಾಲಯ ಪ್ರದೇಶದ ಶಿಮ್ಲಾದಲ್ಲಿ ನಡೆದ 196 ನೇ ಇಎಸ್ಐ ಕಾರ್ಪೊರೇಷನ್ ಸಭೆಯಲ್ಲಿ ಎಸ್ಪಿಆರ್ಇಇ 2025(ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆ) ಅನ್ನು ಅನುಮೋದಿಸಿದೆ.
ಈ ಯೋಜನೆಯಡಿ ಇಎಸ್ಐ ಕಾಯ್ದೆಯಡಿಯಲ್ಲಿನ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು 2025 ರ ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಸಕ್ರಿಯವಾಗಿರುತ್ತದೆ. ಹಾಗೂ ನೋಂದಾಯಿಸದ ಉದ್ಯೋಗದಾತರು ಮತ್ತು ಉದ್ಯೋಗಿಗಳು, ಗುತ್ತಿಗೆ ಮತ್ತು ತಾತ್ಕಾಲಿಕ ಕೆಲಸಗಾರರು ಸೇರಿದಂತೆ ತಪಾಸಣೆ ಅಥವಾ ಹಿಂದಿನ ಬಾಕಿಗಳ ಬೇಡಿಕೆಗಳನ್ನು ಎದುರಿಸದೇ ನೊಂದಾಯಿಸಿಕೊಳ್ಳಲು ಒಂದು ಬಾರಿ ಅವಕಾಶವನ್ನು ನೀಡುತ್ತದೆ.
ಉದ್ಯೋಗದಾತರು ತಮ್ಮ ಘಟಕಗಳು ಮತ್ತು ಉದ್ಯೋಗಿಗಳನ್ನು ಇಎಸ್ಐಸಿ ಪೋರ್ಟಲ್, ಶ್ರಮ ಸುವಿಧಾ ಮತ್ತು ಎಂಸಿಎ ಪೋರ್ಟಲ್ ಮೂಲಕ ಡಿಜಿಟಲ್ ರೂಪದಲ್ಲಿ ನೋಂದಾಯಿಸಿಕೊಳ್ಳಬಹುದು. ಉದ್ಯೋಗದಾತರು ಘೋಷಿಸಿದ ದಿನಾಂಕದಿAದ ನೋಂದಣಿಯನ್ನು ಮಾನ್ಯವೆಂದು ಪರಿಗಣಿಸಲಾಗುತ್ತದೆ. ನೋಂದಣಿಗೆ ಮುಂಚಿನ ಅವಧಿಗಳಿಗೆ ಯಾವುದೇ ಕೊಡುಗೆ ಅಥವಾ ಪ್ರಯೋಜನ ಅನ್ವಯಿಸುವುದಿಲ್ಲ. ನೋಂದಣಿ ಪೂರ್ವ ಅವಧಿಗೆ ಯಾವುದೇ ತಪಾಸಣೆ ಅಥವಾ ಹಿಂದಿನ ದಾಖಲೆಗಳಿಗೆ ಬೇಡಿಕೆಯನ್ನು ಮಾಡಲಾಗುವುದಿಲ್ಲ.
ಹಿಂದಿನ ದಂಡಗಳ ಭಯವನ್ನು ತೆಗೆದು ಹಾಕುವ ಮೂಲಕ ಮತ್ತು ನೋಂದಣಿ ಪ್ರಕ್ರಿಯೆಯನ್ನು ಸರಾಗಗೊಳಿಸುವ ಮೂಲಕ ಈ ಯೋಜನೆಯು ಸ್ವಯಂಪ್ರೇರಿತ ಅನುಸರಣೆಯನ್ನು ಪ್ರೋತ್ಸಾಹಿಸುತ್ತದೆ. ಈ ಯೋಜನೆಯು ನೋಂದಣಿ ಪ್ರಕ್ರಿಯೆಗೆ ಮೊದಲಿದ್ದ ಅಡೆತಡೆಗಳನ್ನು ಪರಿಹರಿಸುತ್ತದೆ. ಬಿಟ್ಟು ಹೋದ ಸಂಸ್ಥೆಗಳು ಮತ್ತು ಕಾರ್ಮಿಕರನ್ನು ಇಎಸ್ಐ ವ್ಯಾಪ್ತಿಗೆ ತರುವ ಮತ್ತು ವಿಶಾಲವಾದ ಸಾಮಾಜಿಕ ರಕ್ಷಣೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ.
ಎಸ್ಪಿಆರ್ಇಇ 2025 ಎಲ್ಲರನ್ನು ಒಳಗೊಳ್ಳುವ ಮತ್ತು ನೌಕರರ ಸಾಮಾಜಿಕ ಭದ್ರತೆಯ ಕಡೆಗೆ ಇಟ್ಟಿರುವ ಒಂದು ಪ್ರಗತಿಪರ ಹೆಜ್ಜೆಯಾಗಿದೆ. ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ ಮತ್ತು ಹಿಂದಿನ ಹೊಣೆಗಾರಿಕೆಗಳಿಂದ ವಿನಾಯಿತಿ ನೀಡುವ ಮೂಲಕ ಈ ಯೋಜನೆಯು ಉದ್ಯೋಗದಾತರು ತಮ್ಮ ಕಾರ್ಯ ಪಡೆಯನ್ನು ಕ್ರಮಬದ್ದಗೊಳಿಸಲು ಪ್ರೋತ್ಸಾಹಿಸುವುದಲ್ಲದೇ, ಹೆಚ್ಚಿನ ಕಾರ್ಮಿಕರು, ವಿಶೇಷವಾಗಿ ಗುತ್ತಿಗೆ ವಲಯಗಳಲ್ಲಿರುವವರು ಇಎಸ್ಐ ಕಾಯ್ದೆಯಡಿಯಲ್ಲಿ ಅಗತ್ಯ ಆರೋಗ್ಯ ಮತ್ತು ಸಾಮಾಜಿಕ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.
ಭಾರತದಲ್ಲಿ ಕಲ್ಯಾಣ ಕೇಂದ್ರಿತ ಕಾರ್ಮಿಕ ಪರಿಸರ ವ್ಯವಸ್ಥೆಯ ದೃಷ್ಟಿಕೋನಕ್ಕೆ ಅನುಗುಣವಾಗಿ ತನ್ನ ವ್ಯಾಪ್ತಿಯನ್ನು ಬಲಪಡಿಸಲು ಮತ್ತು ಸಾರ್ವತ್ರಿಕ ಸಾಮಾಜಿಕ ರಕ್ಷಣೆಯ ಉದ್ದೇಶವನ್ನು ಪೂರೈಸಲು ಇಎಸ್ಐಸಿ ಬದ್ದವಾಗಿದೆ ಎಂದು ಶಿವಮೊಗ್ಗ ಶಾಖಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.