ಬೆಳಗಾವಿ: ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು ಯಾವ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.
ಸುರ್ಜೇವಾಲಾ ಸರ್ಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ ಎಬ ವದಂತಿ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಸುರ್ಜೇವಾಲಾ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿಲ್ಲ. ಎಲ್ಲಾ ಸಚಿವರನ್ನು ಕರೆದು ಚರ್ಚೆ ಮಾಡಿದ್ದಾರೆ. ಸಚಿವರ ಜನಪರ ಕಾಳಜಿ, ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆಯಷ್ಟೇ ಕೇಳಿದ್ದಾರೆ ಎಂದರು.
ಪ್ರತಿ ಮೂರು ತಿಂಗಳಿಗೊಮ್ಮೆ ಸುರ್ಜೆವಾಲಾ ಅವರು ಸಚಿವರು, ಶಾಸಕರನ್ನು ಭೇಟಿಯಾಗುತ್ತಿದ್ದಾರೆ. ಇದಕ್ಕೆ ಮೌಲ್ಯಮಾಪನ ಅಂತಾ ಹೇಳಲು ಬರುವುದಿಲ್ಲ. ನಮ್ಮನ್ನೆಲ್ಲಾ ಕರೆದು ಇಲಾಖೆಗಳ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯನ್ನಷ್ಟೇ ಸಂಗ್ರಹಿಸಿದ್ದಾರೆ ಎಂದರು.
ಸೆಪ್ಟೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎಂಬ ಸಚಿವ ಕೆ.ಎನ್.ರಾಜಣ್ಣ ಅವರು ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ನಮ್ಮದು ಹೈಕಮಾಂಡ್ ಮಾತು ಕೇಳುವ ಪಕ್ಷ, ಸಿಎಂ, ಡಿಸಿಎಂ ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು ನಾನು ಮಾತನಾಡಲ್ಲ ಎಂದು ಹೇಳಿದರು.