ದಕ್ಷಿಣ ಆಫ್ರಿಕಾದ ಅತ್ಯಂತ ಐಷಾರಾಮಿ ಗೇಮ್ ರಿಸರ್ವ್‌ಗಳಲ್ಲಿ ಒಂದಾದ ಗೋಂಡ್ವಾನಾ ಪ್ರೈವೇಟ್ ಗೇಮ್ ರಿಸರ್ವ್‌ನ ಸಹ-ಮಾಲೀಕ, ಬಹುಕೋಟಿ ಒಡೆಯ ಎಫ್‌ಸಿ ಕಾನ್ರಾಡಿ (39) ಆನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಈ ದುರಂತ ಘಟನೆ ಪರಿಸರ ಪ್ರವಾಸೋದ್ಯಮ ವಲಯದಲ್ಲಿ ಆಘಾತ ಮೂಡಿಸಿದೆ.
ಸಂರಕ್ಷಣಾವಾದಿಯೂ ಆಗಿದ್ದ ಕಾನ್ರಾಡಿ, ಪ್ರವಾಸಿ ಲಾಡ್ಜ್‌ಗಳಿಂದ ಆನೆಗಳ ಗುಂಪನ್ನು ದೂರ ಸರಿಸಲು ಪ್ರಯತ್ನಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸುಮಾರು ಆರು ಟನ್ ತೂಕದ ಬೃಹತ್ ಆನೆಯೊಂದು ಅವರತ್ತ ತಿರುಗಿ, ತನ್ನ ದಂತಗಳಿಂದ ಇರಿದು, ಅನೇಕ ಬಾರಿ ತುಳಿದುಹಾಕಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಸಮೀಪದಲ್ಲಿದ್ದ ರೇಂಜರ್‌ಗಳ ಪ್ರಯತ್ನದ ಹೊರತಾಗಿಯೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ದಕ್ಷಿಣ ಆಫ್ರಿಕಾದ ಇಕೋ-ಪ್ರವಾಸೋದ್ಯಮದಲ್ಲಿ ಹೆಸರಾದ ಕಾನ್ರಾಡಿ, ಜನನಿಬಿಡ ಪ್ರದೇಶದಿಂದ ಆನೆಗಳನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಾಗ ಈ ಮಾರಣಾಂತಿಕ ಘಟನೆ ನಡೆದಿದೆ. ಮೊಸೆಲ್ ಕೊಲ್ಲಿಯ ಬಳಿ ಇರುವ ಗೋಂಡ್ವಾನಾ ಪ್ರೈವೇಟ್ ಗೇಮ್ ರಿಸರ್ವ್, ‘ಬಿಗ್ ಫೈವ್’ (ಸಿಂಹ, ಚಿರತೆ, ಆನೆ, ಖಡ್ಗಮೃಗ, ಎಮ್ಮೆ) ಪ್ರಾಣಿಗಳನ್ನು ನೋಡಲು ಬರುವ ಸೆಲೆಬ್ರಿಟಿಗಳು ಮತ್ತು ಪ್ರವಾಸಿಗರಿಗೆ ಹೆಸರುವಾಸಿಯಾಗಿದೆ. ಪ್ರತಿ ದಂಪತಿಗೆ ರಾತ್ರಿ 900 ಪೌಂಡ್‌ಗಳಷ್ಟು ಶುಲ್ಕ ವಿಧಿಸುವ ಈ ಲಾಡ್ಜ್, ಘಟನೆ ನಡೆದ ಸಮಯದಲ್ಲಿ ಸಂಪೂರ್ಣವಾಗಿ ಬುಕ್ ಆಗಿತ್ತು ಎಂದು ವರದಿಯಾಗಿದೆ. ಈ ಹಿಂಸಾತ್ಮಕ ದಾಳಿಯನ್ನು ಯಾವುದೇ ಅತಿಥಿಗಳು ನೋಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
ಕಳೆದ ಒಂದು ವರ್ಷದಲ್ಲಿ 27,000 ಎಕರೆ ವಿಸ್ತೀರ್ಣದ ಈ ರಿಸರ್ವ್‌ನಲ್ಲಿ ನಡೆದ ಎರಡನೇ ಮಾರಣಾಂತಿಕ ಆನೆ ದಾಳಿ ಇದಾಗಿದೆ. ಮಾರ್ಚ್ 2023 ರಲ್ಲಿ, 36 ವರ್ಷದ ಡೇವಿಡ್ ಕಂಡೆಲಾ, ಒಬ್ಬ ಸಿಬ್ಬಂದಿ, ಪರಿಸರ ಟೆಂಟ್ ಲಾಡ್ಜ್ ಪ್ರದೇಶದ ಮೂಲಕ ಹಿಂಡು ಆನೆಗಳನ್ನು ಕರೆದೊಯ್ಯುವಾಗ ಆನೆ ದಾಳಿಗೆ ಬಲಿಯಾಗಿದ್ದರು. ಕಂಡೆಲಾ ಅವರನ್ನು ಆನೆಗಳು (ಬಾನ್ನಿ ಎಂಬ ಮಾಜಿ ಸರ್ಕಸ್ ಆನೆ ಸೇರಿದಂತೆ) ಇರಿದು, ಪೊದೆಗಳಿಗೆ ಎಳೆದುಕೊಂಡು ಹೋಗಿ ವಿರೂಪಗೊಳಿಸಿದ್ದವು.
ಎಫ್‌ಸಿ ಕಾನ್ರಾಡಿ ಬಗ್ಗೆ
ಎಫ್‌ಸಿ ಕಾನ್ರಾಡಿ ಅವರು ಕೇಲಿಕ್ಸ್ ಗ್ರೂಪ್ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕಂಪನಿಯ ಮುಖ್ಯಸ್ಥರೂ ಆಗಿದ್ದರು. ವನ್ಯಜೀವಿಗಳ ಬಗ್ಗೆ, ವಿಶೇಷವಾಗಿ ಆನೆಗಳ ಬಗ್ಗೆ ಆಳವಾದ ಒಲವು ಹೊಂದಿದ್ದರು ಎಂದು ಸಿಬ್ಬಂದಿ ಅವರನ್ನು ಬಣ್ಣಿಸಿದ್ದಾರೆ. ಅವರು ತಾವು ಅತಿ ಹೆಚ್ಚು ಪ್ರೀತಿಸುತ್ತಿದ್ದ ಪ್ರಾಣಿಗಳನ್ನು ಛಾಯಾಚಿತ್ರ ತೆಗೆಯುವುದರಲ್ಲಿ ನಿರತರಾಗಿರುತ್ತಿದ್ದರು ಎಂದು ಡೈಲಿ ಮೇಲ್ ವರದಿ ಮಾಡಿದೆ.