ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ನಟನೆಯ ಚೊಚ್ಚಲ ಚಿತ್ರ ‘ಸೈಯಾರಾ’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ದಾಖಲೆಗಳನ್ನು ನಿರ್ಮಿಸಿರುವ ಈ ಚಿತ್ರ, ಪ್ರೇಕ್ಷಕರಿಂದ ಸಿಕ್ಕಾಪಟ್ಟೆ ಪ್ರೀತಿಯನ್ನು ಗಳಿಸುತ್ತಿದೆ. ಅದರಲ್ಲೂ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಅತಿಯಾದ ಭಾವನಾತ್ಮಕ ಪ್ರತಿಕ್ರಿಯೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಭಾವಪರವಶನಾಗಿ ಕುಸಿದು ಬಿದ್ದ ಅಭಿಮಾನಿ
ಇತ್ತೀಚೆಗೆ ವೈರಲ್ ಆದ ವಿಡಿಯೋ ಒಂದರಲ್ಲಿ, ವ್ಯಕ್ತಿಯೊಬ್ಬರು ಚಿತ್ರಮಂದಿರದಲ್ಲಿ ‘ಸೈಯಾರಾ’ ವೀಕ್ಷಿಸುತ್ತಾ, ಚಿತ್ರದ ಹಾಡೊಂದಕ್ಕೆ ಅತಿಯಾಗಿ ಭಾವನಾತ್ಮಕವಾಗಿ ಸ್ಪಂದಿಸಿದ್ದಾರೆ. ಶರ್ಟ್ ತೆಗೆದು ಜೋರಾಗಿ ಕೂಗಾಡುತ್ತಾ, ಎದೆ ಬಡಿದುಕೊಂಡ ಅವರು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ.
ಈ ದೃಶ್ಯ ನೆರೆದಿದ್ದವರನ್ನು ಆಶ್ಚರ್ಯಗೊಳಿಸಿದೆ. ವಿಡಿಯೋದಲ್ಲಿ, ಆ ವ್ಯಕ್ತಿ ಎಷ್ಟು ಭಾವುಕರಾಗಿದ್ದರು ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಜೊತೆಗೆ, ಚಿತ್ರಮಂದಿರದಲ್ಲಿದ್ದ ಉಳಿದ ಪ್ರೇಕ್ಷಕರೂ ಸಹ ಭಾವಪರವಶರಾಗಿ ಕೂಗಾಡುತ್ತಿರುವುದು ಕಂಡುಬಂದಿದೆ. ಈ ಘಟನೆ ನಡೆದ ಚಿತ್ರಮಂದಿರದ ಹೆಸರು ಅಥವಾ ಸ್ಥಳ ಇನ್ನೂ ತಿಳಿದುಬಂದಿಲ್ಲವಾದರೂ, ನೆಟ್ಟಿಗರಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
‘ಸೈಯಾರಾ’ದ ಭರ್ಜರಿ ಕಲೆಕ್ಷನ್
ಮೊಹಿತ್ ಸೂರಿ ನಿರ್ದೇಶನದ ‘ಸೈಯಾರಾ’ ಚಿತ್ರದ ಯಶಸ್ಸು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಮೊದಲ ದಿನವೇ ₹21.5 ಕೋಟಿ ಗಳಿಸಿ ದಾಖಲೆ ನಿರ್ಮಿಸಿದ ಈ ಚಿತ್ರ, 2025ರ ಅತಿ ದೊಡ್ಡ ಆರಂಭಿಕ ಗಳಿಕೆಯ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ಕೇವಲ ನಾಲ್ಕು ದಿನಗಳಲ್ಲಿ ₹100 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಚಿತ್ರದ ಬಜೆಟ್ ಸುಮಾರು ₹35-40 ಕೋಟಿ ಇದ್ದು, ಅದು ಈಗಾಗಲೇ ಸಂಪೂರ್ಣವಾಗಿ ವಸೂಲಿಯಾಗಿದೆ ಮತ್ತು ಭಾರೀ ಲಾಭ ಗಳಿಸುತ್ತಿದೆ. ತೆಲುಗು ಸ್ಟಾರ್ ಮಹೇಶ್ ಬಾಬು ಸಹ ‘ಸೈಯಾರಾ’ ಚಿತ್ರವನ್ನು ವೀಕ್ಷಿಸಿ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.