ಬೆಂಗಳೂರು: ಕ್ರೀಡಾಪಟುಗೆ ಬಹುಮಾನ ಹಣ ನೀಡಲು ವಿಳಂಬ ಮಾಡಿದ ಕ್ರೀಡಾ ಇಲಾಖೆಗೆ ಹೈಕೋರ್ಟ್ 2 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನ ಸೇರಿ ಹಲವು ಪದಕ ಗಳಿಸಿರುವ ರಾಜ್ಯದ ವಿಕಲಚೇತನ ಈಜು ಪಟು ಕೆ.ಎಸ್. ವಿಶ್ವಾಸ್(34) ಅವರಿಗೆ ಘೋಷಿಸಿದ ನಗದು ಬಹುಮಾನದಲ್ಲಿ 1.26 ಲಕ್ಷ ರೂಪಾಯಿ ನೀಡದೇ ಸತಾಯಿಸಿರುವ ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಗೆ ಹೈಕೋರ್ಟ್ 2 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಬಹುಮಾನದ ಹಣ ಪಾವತಿಸಲು ವಿಳಂಬ ಮಾಡಿದ ಇಲಾಖೆಯ ಕ್ರಮದ ಬಗ್ಗೆ ಆಕ್ಷೇಪಿಸಿ ಎರಡು ಕೈ ಕಳೆದುಕೊಂಡಿರುವ ವಿಕಲಚೇತನ ಈಜುಪಟು ವಿಶ್ವಾಸ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯ ಪೀಠದಿಂದ ಈ ಆದೇಶ ನೀಡಲಾಗಿದೆ.
ಅರ್ಜಿದಾರರಿಗೆ ನೀಡಬೇಕಾಗಿರುವ 1.26 ಲಕ್ಷ ರೂ. ಎರಡು ವಾರದಲ್ಲಿ ಬಿಡುಗಡೆ ಮಾಡಬೇಕು. ಈ ಅವಧಿಯಲ್ಲಿ ಹಣ ಬಿಡುಗಡೆ ಮಾಡದಿದ್ದರೆ ಪ್ರತಿಯೊಂದು ದಿನಕ್ಕೆ ಒಂದು ಸಾವಿರ ರೂ. ದಂಡ ಹೆಚ್ಚುವರಿಗಾಗಿ ಪಾವತಿಸಬೇಕು ಎಂದು ಹೇಳಲಾಗಿದೆ.