ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ತಮ್ಮ ವೃತ್ತಿಜೀವನದಿಂದ ಒಂದು ಘಟನೆಯನ್ನು ಅಳಿಸಲು ಬಯಸಿದರೆ, ಅದು ಮಾಜಿ ತಂಡದ ಸಹ ಆಟಗಾರ ಎಸ್. ಶ್ರೀಶಾಂತ್ ಅವರೊಂದಿಗಿನ ವಿವಾದ ಎಂದು ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಆವೃತ್ತಿಯಲ್ಲಿ ನಡೆದ ಘಟನೆಗೆ ತಾವೇ ಸಂಪೂರ್ಣವಾಗಿ ಕಾರಣ ಎಂದು ಒಪ್ಪಿಕೊಂಡಿರುವ ಹರ್ಭಜನ್, ಶ್ರೀಶಾಂತ್ ಅವರ ಮಗಳೊಂದಿಗಿನ ಸಂಭಾಷಣೆಯ ಬಗ್ಗೆಯೂ ಮಾತನಾಡಿದ್ದು, ಅದು ತಮ್ಮನ್ನು ಮಾನಸಿಕವಾಗಿ ಜರ್ಝರಿತಗೊಳಿಸಿದೆ ಎಂದು ಹೇಳಿದ್ದಾರೆ.
2008ರ ಐಪಿಎಲ್ ಆವೃತ್ತಿಯಲ್ಲಿ, ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ ಹರ್ಭಜನ್, ಕಿಂಗ್ಸ್ XI ಪಂಜಾಬ್ನ ಶ್ರೀಶಾಂತ್ಗೆ ಲೀಗ್ ಪಂದ್ಯದ ಕೊನೆಯಲ್ಲಿ ಕಪಾಳಮೋಕ್ಷ ಮಾಡಿದ್ದರು. ಬಿಸಿಸಿಐ ಹರ್ಭಜನ್ ಅವರನ್ನು ಉಳಿದ ಪಂದ್ಯಗಳಿಂದ ಅಮಾನತುಗೊಳಿಸುವ ಮೂಲಕ ಪ್ರತಿಕ್ರಿಯಿಸಿತು. ಆದರೂ ಇದು ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಚರ್ಚಿತ ಘಟನೆಗಳಲ್ಲಿ ಒಂದಾಗಿ ಉಳಿದಿದೆ.
ಆರ್. ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ನಲ್ಲಿನ ‘ಕುಟ್ಟಿ ಸ್ಟೋರೀಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಹರ್ಭಜನ್ ರನ್ನು, ತಮ್ಮ ಜೀವನದಿಂದ ಯಾವ ಘಟನೆಯನ್ನು ತೆಗೆದುಹಾಕಲು ಬಯಸುತ್ತೀರಾ ಎಂದು ಕೇಳಲಾಯಿತು.
ಆಗ 2011ರ ವಿಶ್ವಕಪ್ ತಂಡದ ಭಾಗವಾಗಿದ್ದ ಈ ಆಫ್-ಸ್ಪಿನ್ನರ್, “ನನ್ನ ಜೀವನದಲ್ಲಿ ನಾನು ಬದಲಾಯಿಸಲು ಬಯಸುವ ಒಂದು ವಿಷಯವೆಂದರೆ ಶ್ರೀಶಾಂತ್ ಜೊತೆಗಿನ ಆ ಘಟನೆ. ಆ ಘಟನೆಯನ್ನು ನನ್ನ ವೃತ್ತಿಜೀವನದಿಂದ ತೆಗೆದುಹಾಕಲು ಬಯಸುತ್ತೇನೆ. ಅದು ನನ್ನ ಪಟ್ಟಿಯಿಂದ ನಾನು ಬದಲಾಯಿಸುವ ಘಟನೆ. ಆ ಘಟನೆ ತಪ್ಪಾಗಿತ್ತು ಮತ್ತು ನಾನು ಆ ಕೆಲಸವನ್ನು ಮಾಡಬಾರದಿತ್ತು. ನಾನು 200 ಬಾರಿ ಕ್ಷಮೆಯಾಚಿಸಿದ್ದೇನೆ. ಆ ಘಟನೆಯ ನಂತರವೂ ವರ್ಷಗಳ ಕಾಲ, ನನಗೆ ಸಿಕ್ಕ ಪ್ರತಿ ಅವಕಾಶ ಅಥವಾ ವೇದಿಕೆಯಲ್ಲಿ ಕ್ಷಮೆಯಾಚಿಸುತ್ತಲೇ ಇದ್ದೇನೆ. ಅದು ತಪ್ಪಾಗಿತ್ತು. ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ ಮತ್ತು ಅಂತಹ ತಪ್ಪುಗಳನ್ನು ಎಂದಿಗೂ ಪುನರಾವರ್ತಿಸದಿರಲು ಆಶಿಸುತ್ತೇವೆ ಮತ್ತು ಪ್ರಯತ್ನಿಸುತ್ತೇವೆ. ಅವನು ನನ್ನ ತಂಡದ ಸಹ ಆಟಗಾರನಾಗಿದ್ದ ಮತ್ತು ನಾವು ಒಟ್ಟಿಗೆ ಆಡುತ್ತಿದ್ದೆವು. ಹೌದು, ಆ ಆಟದಲ್ಲಿ ನಾವು ಎದುರಾಳಿಗಳಾಗಿದ್ದೆವು. ಆದರೆ ನಾವು ಅಂತಹ ರೀತಿಯಲ್ಲಿ ವರ್ತಿಸುವ ಮಟ್ಟಕ್ಕೆ ಅದು ಹೋಗಬಾರದಿತ್ತು. ಅದು ನನ್ನ ತಪ್ಪಾಗಿತ್ತು ಮತ್ತು ಅವನ ಏಕೈಕ ತಪ್ಪು ಎಂದರೆ ಅವನು ನನ್ನನ್ನು ಕೆರಳಿಸಿದ್ದು, ಆದಾಗ್ಯೂ, ನಾನು ಮಾಡಿದ್ದು ಸರಿ ಇರಲಿಲ್ಲ. ‘ಕ್ಷಮಿಸಿ’ ಎಂದು ಹೇಳಿದೆ,” ಎಂದು ಭಾವುಕರಾಗಿ ಹರ್ಭಜನ್ ಹೇಳಿದರು.
ಸದ್ಯ ಸಂಸದರಾಗಿರುವ 45 ವರ್ಷದ ಹರ್ಭಜನ್ ಸಿಂಗ್, ಶ್ರೀಶಾಂತ್ ಅವರ ಮಗಳೊಂದಿಗಿನ ಸಂಭಾಷಣೆಯ ನಂತರ ಆ ಘಟನೆ ತಮ್ಮ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ವಿವರಿಸಿದರು. “ಅನೇಕ ವರ್ಷಗಳ ನಂತರವೂ ನನಗೆ ನೋವುಂಟುಮಾಡಿದ್ದು, ನಾನು ಅವನ ಮಗಳನ್ನು ಭೇಟಿಯಾಗಿ ಅವಳೊಂದಿಗೆ ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದಾಗ, ಅವಳು ‘ನಾನು ನಿಮ್ಮೊಂದಿಗೆ ಮಾತನಾಡಲು ಬಯಸುವುದಿಲ್ಲ. ನೀವು ನನ್ನ ತಂದೆಯನ್ನು ಹೊಡೆದಿದ್ದೀರಿ’ ಎಂದು ಹೇಳಿದ್ದು. ಇದರಿಂದ ನನ್ನ ಹೃದಯ ಚೂರಾಯಿತು ಮತ್ತು ಕಣ್ಣೀರು ಹಾಕುವ ಹಂತದಲ್ಲಿದ್ದೆ. ನಾನು ಆಕೆಯ ಮೇಲೆ ಯಾವ ರೀತಿಯ ಪ್ರಭಾವ ಬೀರಿದ್ದೇನೆ ಎಂದು ನನ್ನನ್ನೇ ಕೇಳಿಕೊಂಡೆ? ಅವಳು ನನ್ನನ್ನು ಕಳಪೆ ದೃಷ್ಟಿಯಿಂದ ನೋಡುತ್ತಿರಬೇಕು, ಅಲ್ಲವೇ? ಅವಳು ನನ್ನನ್ನು ತನ್ನ ತಂದೆಯನ್ನು ಹೊಡೆದ ವ್ಯಕ್ತಿ ಎಂದು ನೋಡುತ್ತಾಳೆ. ನನಗೆ ತುಂಬಾ ಕೆಟ್ಟದಾಗಿ ಅನಿಸಿತು. ಆ ಮಗಳಿಗೆ ನಾನು ಈಗಲೂ ಕ್ಷಮೆಯಾಚಿಸುತ್ತೇನೆ” ಎಂದು ಹರ್ಭಜನ್ ಭಾವುಕರಾಗಿ ಹೇಳಿದ್ದಾರೆ.