ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಸರ್ಕಾರಿ ಉದ್ಯೋಗ ಪಡೆಯುವುದೇ ಕಷ್ಟ ಸಾಧ್ಯ. ಹೀಗಿರುವಾಗ ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಐಗಳಿ ಗ್ರಾಮದ ಪ್ರಶಾಂತ ಅಣ್ನಾಸಾಬ ಹಿಪ್ಪರಗಿ(26) ಅವರು 10 ಸರ್ಕಾರಿ ನೌಕರಿಗೆ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಚಿಕ್ಕೋಡಿ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಲ್ಲಿ ಸಹಕಾರ ಸಂಘಗಳ ನಿರೀಕ್ಷಕರಾಗಿ ಒಂದು ವಾರದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ವರ್ಷ ಎಂಎಸ್ಐಎಲ್ ನಲ್ಲಿ ಪ್ರಥಮ ದರ್ಜೆ ಸಹಾಯಕ ಮತ್ತು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ ನಿರೀಕ್ಷಕರಾಗಿಯೂ ಪ್ರಶಾಂತ ಆಯ್ಕೆಯಾಗಿದ್ದಾರೆ.
2019ರಲ್ಲಿ ಕೆಎಸ್‌ಆರ್‌ಪಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್, 2022 ರಲ್ಲಿ ಅಗ್ನಿಶಾಮಕ ಇಲಾಖೆಯಲ್ಲಿ ಫೈರ್ ಮನ್, 2024ರಲ್ಲಿ ಸಿಎಆರ್ ಪೊಲೀಸ್ ಕಾನ್ಸ್ಟೇಬಲ್, ಸಿವಿಲ್ ಪೊಲೀಸ್ ಕಾನ್ಸ್ಟೇಬಲ್, ಆಹಾರ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ಮತ್ತು ಪ್ರಥಮ ದರ್ಜೆ ಸಹಾಯಕ, ಕಾರ್ಮಿಕ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಆಯ್ಕೆಯಾಗಿದ್ದರು.
ಯಾವುದಾದರೂ ಇಲಾಖೆಯಲ್ಲಿ ಉತ್ತಮ ಹುದ್ದೆ ಪಡೆಯುವ ಆಸೆಯಿಂದ ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಾಜರಾಗಿದ್ದ ಅವರು 10 ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಈಗ ಸಹಕಾರ ಸಂಘಗಳ ನಿರೀಕ್ಷಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.