ನವದೆಹಲಿ: ಸಂಸತ್ತಿನ ಮಳೆಗಾಲ ಅಧಿವೇಶನ ನಾಳೆಯಿಂದ ಪ್ರಾರಂಭವಾಗಲಿದ್ದು, ಒಂದು ದಿನ ಮೊದಲು ಸದನದ ಸುಗಮ ಕಾರ್ಯನಿರ್ವಹಣೆಗೆ ಸಹಕಾರ ಪಡೆಯಲು ಸರ್ಕಾರವು ಸರ್ವಪಕ್ಷ ಸಭೆಯನ್ನು ಕರೆದಿತ್ತು.
ಅಧಿವೇಶನದಲ್ಲಿ ವಿಪಕ್ಷಗಳು ಪ್ರಸ್ತಾಪಿಸಲು ಯೋಜಿಸಿರುವ ವಿಷಯಗಳ ಪಟ್ಟಿಯನ್ನು ಮುಂದಿಡಲಾಗಿದೆ.
ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳು ಮತ್ತು ಬಿಹಾರದಲ್ಲಿ ಮತದಾರರ ಪಟ್ಟಿಯ ಲೋಪಗಳ ಬಗ್ಗೆ ಪ್ರಧಾನಿ ಅಧಿವೇಶನದಲ್ಲಿ ಸ್ಪಷ್ಟನೆ ನೀಡಬೇಕೆಂದು ವಿಪಕ್ಷಗಳು ಒತ್ತಾಯಿಸಿವೆ.
ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ಭಾನುವಾರ ಕೇಂದ್ರ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಕಾಂಗ್ರೆಸ್ ಸಂಸದರಾದ ಕೆ ಸುರೇಶ್, ಗೌರವ್ ಗೊಗೊಯ್ ಮತ್ತು ಜೈರಾಮ್ ರಮೇಶ್, ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ, ಕೇಂದ್ರ ಸಚಿವ ಅನುಪ್ರಿಯಾ ಪಟೇಲ್, ಎನ್‌ಸಿಪಿ-ಎಸ್‌ಸಿಪಿ ಸಂಸದೆ ಸುಪ್ರಿಯಾ ಸುಳೆ, ಬಿಜೆಪಿ ಸಂಸದ ರವಿ ಕಿಶನ್ ಮತ್ತು ಇತರರು ಉಪಸ್ಥಿತರಿದ್ದರು.
ಸರ್ವಪಕ್ಷ ಸಭೆಯಲ್ಲಿ, ಟ್ರಂಪ್ ಅವರ ಹೇಳಿಕೆಗಳು, ಪಹಲ್ಗಾಮ್‌ನಲ್ಲಿ ‘ಲೋಪಗಳು’ ಮತ್ತು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಂದ ಉತ್ತರ ಬಯಸಿದ್ದೇವೆ ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಹೇಳಿದರು.
ಗೌರವ್ ಗೊಗೊಯ್ ಅವರು ಪ್ರಧಾನಿ ಮೋದಿ ಈ ಸದನಕ್ಕೆ ಬಂದು ಮೂರು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುವುದು ಬಹಳ ಮುಖ್ಯ ಎಂದು ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ, ಅದರಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಕಾಮೆಂಟ್ ಮತ್ತು ಭಾರತ ಮತ್ತು ಪಾಕಿಸ್ತಾನ ನಡುವಿನ “ಅಮೆರಿಕ ಮಧ್ಯಸ್ಥಿಕೆ” ಒಪ್ಪಂದದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ. ಬಿಹಾರ ಮತದಾನ ಪಟ್ಟಿ ಬಗ್ಗೆ ಮೋದಿ ಉತ್ತರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸಂಸತ್ತಿನ ಮಳೆಗಾಲದ ಅಧಿವೇಶನ ಜುಲೈ 21 ರಂದು ಪ್ರಾರಂಭವಾಗಿ ಆಗಸ್ಟ್ 21 ರವರೆಗೆ ಮುಂದುವರಿಯಲಿದೆ.