ಬೀದರ್: ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಪುತ್ರ ಪ್ರತೀಕ್ ಚೌವ್ಹಾಣ್ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಹರವೆಸಗಿ ಕೈಕೊಟ್ಟ ಆರೋಪ ಕೇಳಿಬಂದಿದ್ದು, ಸಂತ್ರಸ್ತ ಯುವತಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಶಾಸಕ ಪ್ರಭು ಚೌವ್ಹಾಣ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಬೀದರ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಭು ಚೌವ್ಹಾಣ್, ನನ್ನ ಕುಟುಂಬದ ಹೆಸರು ಕೆಡಿಸಲು ಒಂದು ಗ್ಯಾಂಗ್ ಕೆಲಸ ಮಾಡುತ್ತಿದೆ. ಅದೇ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಗ್ಯಾಂಗ್. ಯಾವುದೇ ಕೆಲಸ ಮಾಡಿದರೂ ಅದಕ್ಕೆ ಆ ಗ್ಯಾಂಗ್ ಅಡ್ಡಿ ಪಡಿಸುತ್ತಿದೆ. 2014ರಿಂದಲೂ ಆ ಗ್ಯಾಂಗ್ ನನ್ನ ವಿರುದ್ಧ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಆ ಯುವತಿಯನ್ನು ಕರೆದೊಯ್ದು ದೂರು ಕೊಡಿಸಿದ್ದೇ ಅದೇ ಗ್ಯಾಂಗ್. ಯುವತಿ ದೂರು ನೀಡುವಷ್ಟರ ಮಟ್ಟಕ್ಕೆ ಹೋಗಿದ್ದಾಳೆ ಎಂದರೆ ಇದರ ಹಿಂದೆ ಆ ಗ್ಯಾಂಗ್ ಕೈವಾಡವಿದೆ ಎಂದಿದ್ದಾರೆ. ನನ್ನ ಮಗ ಯಾವ ತಪ್ಪು ಮಾಡಿಲ್ಲ. ಯುವತಿ ನಿಶ್ಚಿತಾರ್ಥವಾದಾಗಿನಿಂದಲೂ ಬೇರೆಯವರ ಜೊತೆ ಚಾಟಿಂಗ್, ವಿಡಿಯೋ ಕಾಲ್ ಮಾಡುತ್ತಿದ್ದಳು. ನಾನು ಹಲವು ಬಾರಿ ಬುದ್ಧಿ ಹೇಳಿದ್ದೆ. ಯುವತಿ ನನ್ನ ಮಗಳಂತೆ ಏನೋ ತಪ್ಪು ಮಾಡಿದ್ದಾಳೆ ಎಂದು ಸುಮ್ಮನಾಗಿದ್ದೆ. ಆದರೆ ಈಗ ದೂರು ನೀಡಿದ್ದಾಳೆ.
ನನ್ನ ಮಗ, ಸೊಸೆ, ಅವರ ಸಹೋದರಿ ಶಿರಡಿಗೆ ಹೋಗಿದ್ದರು. ನನ್ನ ಮಗ ಯಾವುದೇ ಉಲ್ಟಾಪಲ್ಟಾ ಕೆಲಸ ಮಾಡುವವನಲ್ಲ. ನನ್ನ ಮಗನಿಗೆ ಬೇಕಾದರೆ ವೈದ್ಯಕೀಯ ತಪಾಸಣೆ ಮಾಡಿಸಲಿ. ನನ್ನ ಮಗ ನೆಪ ಮಾತ್ರ. ನನ್ನನ್ನು ರಾಜಕೀಯವಾಗಿ ಮುಗಿಸಲು ಪ್ಲಾನ್ ಮಾಡಿದ್ದಾರೆ. ನಮ್ಮ ಕುಟುಂಬದ ವಿಚಾರಕ್ಕೆ ಬಂದರೆ ಸುಮ್ಮನಿರಬೇಕಾ? ಹತ್ತು ವರ್ಷಗಳಿಂದ ಭಗವಂತ ಖೂಬಾ ನನಗೆ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.