ತಮಿಳುನಾಡಿನ ನೀಲಗಿರಿ ಅರಣ್ಯದಲ್ಲಿ ಚಿರತೆಗಳೊಂದಿಗೆ ಕಪ್ಪು ಪ್ಯಾಂಥರ್ (ಬ್ಲಾಕ್ ಪ್ಯಾಂಥರ್) ನಡೆದುಕೊಂಡು ಹೋಗುತ್ತಿರುವ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ವನ್ಯಜೀವಿ ಪ್ರಿಯರನ್ನು ಥ್ರಿಲ್ ಮಾಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದೆ.
ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಈ 29 ಸೆಕೆಂಡುಗಳ ವೀಡಿಯೋವನ್ನು X (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. “ನೀಲಗಿರಿಯ ರಸ್ತೆಗಳಲ್ಲಿ ‘ಬಘೀರಾ’ (ಕಪ್ಪು ಪ್ಯಾಂಥರ್) ಮತ್ತು ಇತರ ಸ್ನೇಹಿತರ ರಾತ್ರಿ ನಡಿಗೆ. ಎಂತಹ ಅಪರೂಪದ ವಿಷಯ!” ಎಂದು ಅವರು ಬರೆದುಕೊಂಡಿದ್ದಾರೆ. ರಾತ್ರಿಯ ಕತ್ತಲಿನಲ್ಲಿ ಮೂರು ದೊಡ್ಡ ಬೆಕ್ಕುಗಳು ರಸ್ತೆಯಲ್ಲಿ ಶಾಂತವಾಗಿ ನಡೆದು ಹೋಗುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಕಪ್ಪು ಪ್ಯಾಂಥರ್ ಪ್ರತ್ಯೇಕ ಪ್ರಭೇದವಲ್ಲ
ಕಸ್ವಾನ್ ಅವರು ತಮ್ಮ ಮುಂದಿನ ಪೋಸ್ಟ್ನಲ್ಲಿ, ಕಪ್ಪು ಪ್ಯಾಂಥರ್ ಪ್ರತ್ಯೇಕ ಪ್ರಭೇದವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಭಾರತೀಯ ಚಿರತೆಯ (Panthera pardus) ಮೆಲನಿಸ್ಟಿಕ್ ರೂಪಾಂತರವಾಗಿದೆ. “ಮೆಲನಿಸಂ ಎಂಬ ಆನುವಂಶಿಕ ಸ್ಥಿತಿಯಿಂದಾಗಿ ಈ ಪ್ರಾಣಿಗಳು ಕಪ್ಪು ಬಣ್ಣದಲ್ಲಿ ಕಾಣುತ್ತವೆ. ಇದು ಅತಿಯಾದ ಕಪ್ಪು ವರ್ಣದ್ರವ್ಯಕ್ಕೆ ಕಾರಣವಾಗುತ್ತದೆ. ಅವುಗಳ ಮೈಬಣ್ಣ ಕಪ್ಪಾಗಿದ್ದರೂ, ಕೆಲವು ಬೆಳಕಿನಲ್ಲಿ ಚಿರತೆಯ ರೋಸೆಟ್ಗಳು (ಮೈಮೇಲಿನ ಕಲೆಗಳು) ಗೋಚರಿಸುತ್ತವೆ. ಅವು ಸಾಮಾನ್ಯವಾಗಿ ಚಿರತೆಗಳೊಂದಿಗೆ ಕಂಡುಬರುತ್ತವೆ. ಆದರೆ, ಒಂದು ಕಪ್ಪು ಪ್ಯಾಂಥರ್ ಎರಡು ಸಾಮಾನ್ಯ ಚಿರತೆಗಳೊಂದಿಗೆ ಕಾಣಿಸಿಕೊಂಡಿರುವುದು ಬಹಳ ಅಪರೂಪ,” ಎಂದು ಕಸ್ವಾನ್ ವಿವರಿಸಿದ್ದಾರೆ.
ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದ ಕಸ್ವಾನ್, “ಆವಾಸಸ್ಥಾನ ನಷ್ಟ ಮತ್ತು ಬೇಟೆಯಂತಹ ಬೆದರಿಕೆಗಳನ್ನು ಅವು ಎದುರಿಸುವುದರಿಂದ, ಅವುಗಳ ಅಸ್ತಿತ್ವಕ್ಕೆ ಸಂರಕ್ಷಣಾ ಪ್ರಯತ್ನಗಳು ಅತ್ಯಗತ್ಯ” ಎಂದು ತಿಳಿಸಿದ್ದಾರೆ.
ಇಂಟರ್ನೆಟ್ನಲ್ಲಿ ವೈರಲ್
ಈ ಪೋಸ್ಟ್ 25,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ನೆಟ್ಟಿಗರಿಂದ ಸಖತ್ ಪ್ರತಿಕ್ರಿಯೆಗಳನ್ನು ಗಳಿಸಿದೆ. ಒಬ್ಬ ಬಳಕೆದಾರರು, “ಅವರು ಶೇರ್ ಖಾನ್ ಅನ್ನು ಹುಡುಕುತ್ತಿದ್ದಾರೆ,” ಎಂದು ತಮಾಷೆ ಮಾಡಿದರೆ, ಇನ್ನೊಬ್ಬರು “ಮೊಗ್ಲಿಯಿಂದ ಬಘೀರಾ ನೆನಪಾಯಿತು. ಎಂತಹ ಮುದ್ದಾದ ಪಾತ್ರ,” ಎಂದು ಕಾಮೆಂಟ್ ಮಾಡಿದ್ದಾರೆ.
Bagheera (black panther) and other friends for night walk on the roads of Nilgiris. What a rare thing. pic.twitter.com/NtaNSlWUAp
— Parveen Kaswan, IFS (@ParveenKaswan) July 18, 2025