ಕೊಲ್ಕತ್ತಾ: ಕೊಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕ್ಯಾಂಪಸ್ ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಪರಮಾನಂದ ಟೋಪಣ್ಣನವರ್(ಪರಮಾನಂದ ಜೈನ್)ಗೆ ಶನಿವಾರ ಜಾಮೀನು ನೀಡಲಾಗಿದೆ.
ದೂರುದಾರ ಯುವತಿ ತನಿಖೆಗೆ ಅಸಹಕಾರ ತೋರುತ್ತಿದ್ದು, ಹೇಳಿಕೆ ನೀಡಲು ಆಗಮಿಸಿಲ್ಲ. ಎರಡು ಬಾರಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿಲ್ಲ ಎಂದು ಕೋರ್ಟ್ ಗಮನಕ್ಕೆ ತರಲಾಗಿದೆ. ಹೀಗಾಗಿ ಅಲಿಪುರ ಸ್ಥಳೀಯ ನ್ಯಾಯಾಲಯ 50 ಸಾವಿರ ರೂ. ಬಾಂಡ್ ಪಡೆದು ಆರೋಪಿ ಪರಮಾನಂದ ಜೈನ್ ಗೆ ಜಾಮೀನು ನೀಡಿದೆ. ಜುಲೈ 11ರಂದು ಅತ್ಯಾಚಾರ ಘಟನೆ ನಡೆದಿತ್ತು.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರ ಗ್ರಾಮದ ನಿವಾಸಿಯಾಗಿರುವ ಪರಮಾನಂದ ಪಾಸ್ಪೋರ್ಟ್ ಜಪ್ತಿ ಮಾಡಲು ಸೂಚನೆ ನೀಡಲಾಗಿದೆ. ಕೊಲ್ಕತ್ತಾದಿಂದ ಹೊರ ಹೋಗದಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.