ವೇಶ್ಯಾವಾಟಿಕೆಯಲ್ಲಿ ತೊಡಗಲು ನಿರಾಕರಿಸಿದ ಕಾರಣಕ್ಕೆ 22 ವರ್ಷದ ಮಹಿಳೆಯನ್ನು ಆಕೆಯ ಲಿವ್-ಇನ್ ಸಂಗಾತಿಯೇ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಅಂಬೇಡ್ಕರ್ ಕೊನಸೀಮಾ ಜಿಲ್ಲೆಯಲ್ಲಿ ನಡೆದಿದೆ.
ರಾಜೋಳು ಮಂಡಲ ವ್ಯಾಪ್ತಿಯ ಬಿ ಸವರಂ ಗ್ರಾಮದ ಸಿದ್ಧಾರ್ಥ ನಗರದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ಮಹಿಳೆ ಪುಷ್ಪಾ ತನ್ನ ಪತಿಯಿಂದ ಬೇರ್ಪಟ್ಟ ನಂತರ ಕಳೆದ ಆರು ತಿಂಗಳಿನಿಂದ ಶೇಖ್ ಶಮ್ಮಾ (22) ಜೊತೆ ವಾಸಿಸುತ್ತಿದ್ದರು. ದಂಪತಿಗಳು ಗ್ರಾಮದಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದಿದ್ದರು ಎಂದು ವರದಿ ತಿಳಿಸಿದೆ.
ಪೊಲೀಸರ ಪ್ರಕಾರ, ಶಮ್ಮಾ ಇತ್ತೀಚೆಗೆ ಪುಷ್ಪಾಗೆ ಇತರ ಪುರುಷರೊಂದಿಗೆ ಸಂಬಂಧವಿದೆ ಎಂದು ಅನುಮಾನಿಸಲು ಪ್ರಾರಂಭಿಸಿದ್ದರು. ಅಲ್ಲದೇ ಆಕೆಯ ಮೇಲೆ ವೇಶ್ಯಾವಾಟಿಕೆಗೆ ಒತ್ತಡ ಹೇರುತ್ತಿದ್ದರು ಮತ್ತು ಮದ್ಯ ಸೇವಿಸಿದ್ದಾಗ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ವರದಿಯಾಗಿದೆ.
ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರ ನಡುವೆ ಜಗಳ ನಡೆದಿದ್ದು, ತೀವ್ರ ವಾಗ್ವಾದ ನಡೆಯಿತು. ಆಕೆ ನಿರಾಕರಿಸಿದಾಗ, ಅವನು ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಎದೆ ಮತ್ತು ಕಾಲಿಗೆ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಪುಷ್ಪಾಳ ತಾಯಿ ಗಂಗಾ ಮತ್ತು ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಆಕೆಯ ಸಹೋದರ ಕೂಡ ದಾಳಿಯಲ್ಲಿ ಗಾಯಗೊಂಡರು. ತೀವ್ರ ರಕ್ತಸ್ರಾವದಿಂದಾಗಿ ಪುಷ್ಪಾ ಸ್ಥಳದಲ್ಲೇ ಸಾವನ್ನಪ್ಪಿದರು.