ಬೆಂಗಳೂರು: ಕನ್ನಡ ಧ್ವಜಕ್ಕೆ ಅಧಿಕೃತವಾಗಿ ಮಾನ್ಯತೆ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮತ್ತೆ ಪತ್ರ ಬರೆದಿದೆ.
ಹಳದಿ-ಕೆಂಪು ಬಾವುಟಕ್ಕೆ ಅಧಿಕೃತವಾಗಿ ಮಾನ್ಯತೆ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 2017ರಲ್ಲಿ ಕನ್ನಡ ಬಾವುಟದ ಹಕ್ಕು ಕೋರಿ ಅಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ಮತ್ತೊಮ್ಮೆ ಈ ನಿಟ್ಟಿನಲ್ಲಿ ಪತ್ರ ಬರೆಯಲಾಗಿದೆ.
ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದ್ದು, ಈ ನಿಟ್ಟಿನಲ್ಲಿ ನಿಯೋಗ ದೆಹಲಿಗೆ ತೆರಳಿ, ಕೇಂದ್ರ ಸಂಸ್ಕೃತಿ ಸಚಿವರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ.
ಆ ಮೂಲಕ ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ಹಾಗೂ ಶಾಸ್ತ್ರೀಯ ಭಾಷೆ ಅನುದಾನ ಕೋರಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬರಿ ಹೆಸರಿಗೆ ಮಾತ್ರ ಇದೆ. ಈಗಿರುವ ಕನ್ನಡ ಬಾವುಟ ಅಧಿಕೃತವಲ್ಲ. ಇದೇ ಬಾವುಟವನ್ನು ಅಧಿಕೃತಗೊಳಿಸಿ ಎಂದು ಮನವಿ ಮಾಡಿ ಪತ್ರ ಬರೆಯಲಾಗಿದೆ ಎಂದು ಹೇಳಿದರು.