ಬೆಂಗಳೂರು : ಪೊಲೀಸ್ ತನಿಖೆ ಬಳಿಕ ನೂರಾರು ಶವ ಹೂತ ಕೇಸ್ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದು, ಕಾನೂನು ಕ್ರಮ ತೆಗೆದುಕೊಳ್ಳಲಿದೆ. ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ, ಎಸ್ಐಟಿ ರಚನೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ. ತನಿಖೆ ವಿಷಯದಲ್ಲಿ ಯಾರ ಒತ್ತಡವೂ ನಡೆಯಲ್ಲ. ಕಾನೂನು ರೀತಿಯಲ್ಲೇ ಕ್ರಮ ಆಗಲಿದೆ ಎಂದರು.
ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಆರೋಪ ಸಂಬಂಧ ಯಾರೋ ಹೇಳಿದ ಮಾತ್ರಕ್ಕೆ ತನಿಖೆಯನ್ನು ಎಸ್ಐಟಿಗೆ ಕೊಡುವುದಕ್ಕೆ ಆಗಲ್ಲ. ಪೊಲೀಸರು ಈ ಸಂಬಂಧ ತನಿಖೆ ಮಾಡು
ತ್ತಿದ್ದಾರೆ. ಅವರು ಏನು ವರದಿ ಕೊಡುತ್ತಾರೆ ಎಂಬುದನ್ನು ನೋಡೋಣ. ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಮ್ಮ ಮೇಲೆ ಯಾರ ಒತ್ತಡವೂ ಇಲ್ಲ. ಒತ್ತಡ ಇದ್ರೂ ಅದಕ್ಕೆ ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜು.4ರಂದು ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಎದುರು ವಿವರವಾದ ಹೇಳಿಕೆಯನ್ನೂ ನೀಡಿದ್ದರು. ಈ ಪ್ರಕರಣದ ಕುರಿತು ಎಸ್ಐಟಿ ತನಿಖೆಯಾಗಬೇಕು ಎಂಬ ಆಗ್ರಹ ಕೇಳಿಬಂದಿದೆ.