ಮಂಗಳೂರು: ನವೆಂಬರ್ ತಿಂಗಳೊಳಗೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕುಂಜಾಡಿಯಲ್ಲಿ ಅವರು ಮಾತನಾಡಿ, ದೇವರಾಜ ಅರಸು ಅತಿ ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿ ಆಗಿದ್ದರು. ಅರಸು ದಾಖಲೆ ಮುರಿದು ನಾನು ಸಿಎಂ ಕುರ್ಚಿ ಬಿಟ್ಟುಕೊಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಒಪ್ಪಂದ ಮಾಡಿಕೊಂಡಿದ್ದರು. ಡಿ.ಕೆ. ಶಿವಕುಮಾರ್ ಸಿದ್ದರಾಮಯ್ಯ 50:50 ಅಧಿಕಾರ ಹಂಚಿಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಸಂಡೂರು ಉಪಚುನಾವಣೆ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದೆ. ಅದರ ಮುಂದುವರಿದ ಭಾಗವಾಗಿ ಈಗಿನಿಂದಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಬುನಾದಿ ಹಾಕಲು ಆರಂಭಿಸಿದ್ದಾರೆ. ದೇವರಾಜು ಅರಸು ಅವರಿಗಿಂತ ಒಂದು ದಿನ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಅಧಿಕಾರ ಮಾಡುತ್ತಾರೆ. ನನಗೆ ಬಂದ ಮಾಹಿತಿಯ ಪ್ರಕಾರ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ. ಡಿ.ಕೆ. ಶಿವಕುಮಾರ್ ಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡುತ್ತಾರೆ ಎಂದು ರೆಡ್ಡಿ ಹೇಳಿದ್ದಾರೆ.
ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಟ್ಟುಕೊಡದಿದ್ದರೆ ಡಿ.ಕೆ. ಶಿವಕುಮಾರ್ ಕಸಿದುಕೊಳ್ಳುತ್ತಾರೆ. ಬಲವಂತವಾಗಿ ಸಿಎಂ ಕುರ್ಚಿ ಕಸಿದುಕೊಂಡು ಡಿ.ಕೆ. ಕುಳಿತುಕೊಳ್ಳುತ್ತಾರೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ಅಧಿಕಾರ ಪಡೆಯಲೇಬೇಕು ಎನ್ನುವ ಆತುರದಲ್ಲಿ ಡಿಕೆ ಇದ್ದಾರೆ ಎಂದು ಹೇಳಿದ್ದಾರೆ.