ದಾವಣಗೆರೆ: ಸುಡುಗಾಡಿಗೆ ಹೋಗಿ ತೆಂಗಿನಕಾಯಿ ಒಡೆದರೂ ಜಿಎಸ್ಟಿ ಕಟ್ಟಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ.
ದೇಶದ ಶೇಕಡ 70% ರಷ್ಟು ಜನರು ಜಿಎಸ್ಟಿ ಪಾವತಿಸುತ್ತಿದ್ದಾರೆ. ಇದರಿಂದ ಶ್ರೀಮಂತರಿಗೆ ಮಾತ್ರ ಅನುಕೂಲವಾಗುತ್ತಿದೆ ಎಂದು ದಾವಣಗೆರೆಯಲ್ಲಿ ಹೇಳಿದ್ದಾರೆ.
ಹಾಲು, ಮೊಸರು, ಅರಿಶಿನ, ಕುಂಕುಮಕ್ಕೂ ಜಿಎಸ್ಟಿ ಪಾವತಿಸಬೇಕಿದೆ. ಜನರಿಗೆ ಸುಳ್ಳು ಹೇಳಿಕೊಂಡು ಪಿಚ್ಚರ್ ನಡೆಸಿಕೊಂಡು ಹೋಗುತ್ತಿದ್ದಾರೆ. ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಶ್ರೀಮಂತರ ಅಂದಾಜು 16.50 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ರೈತರು, ಬಡವರು, ಮಧ್ಯಮ ವರ್ಗಕ್ಕೆ ಯಾವುದೇ ಅನುಕೂಲ ಮಾಡುತ್ತಿಲ್ಲ ಎಂದು ದೂರಿದ್ದಾರೆ.
ನಗದು ರಹಿತ ವಹಿವಾಟು ಎಂಬುದೇ ಮೋಸದ ವ್ಯವಹಾರ. ಎಲ್ಲೆಡೆ ನಕಲಿ ನೋಟುಗಳ ವಹಿವಾಟು ಪತ್ತೆಯಾಗಿದೆ. ಎರಡು ಸಾವಿರ ರೂಪಾಯಿ ಮುಖಬೆಲೆಯ 26 ಸಾವಿರ ಕೋಟಿಯಷ್ಟು ನಕಲಿ ನೋಟು ಹಾಗೂ 500 ರೂಪಾಯಿ ಮುಖಬೆಲೆಯ 1.14 ಲಕ್ಷ ಕೋಟಿ ರೂ.ನಷ್ಟು ನಕಲಿ ನೋಟುಗಳನ್ನು ಆರ್.ಬಿ.ಐ. ಪತ್ತೆ ಮಾಡಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕೂಲಿ ಸಿಗುವುದಿಲ್ಲ ಎಂಬ ಕಾರಣಕ್ಕೆ 843 ಮಹಿಳೆಯರು ಗರ್ಭಕೋಶ ತೆಗೆಸಿದ್ದಾರೆ. ಇದು ದೇಶದ ದುರ್ದೈವ. ದೇಶದಲ್ಲಿ ಬಡತನ ಹೆಚ್ಚಳವಾಗುತ್ತಿದೆ ಎಂದು ನಿತಿನ್ ದಡ್ಕರಿ ಹೇಳುತ್ತಾರೆ. ಬಡತನ ನಿರ್ಮೂಲನೆಯಾಗಿದೆ ಎಂದು ಪ್ರಧಾನಿಯವರು ಹೇಳುತ್ತಾರೆ. ಇಬ್ಬರಲ್ಲಿ ಯಾರ ಹೇಳಿಕೆ ಸರಿ ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ಎಂದಿಗೂ ವಿಶೇಷ ಚೇತನರು, ವಿಧವೆಯರು, ವೃದ್ಧರ ಮಾಶಾಸನದಲ್ಲಿ ಒಂದು ರೂಪಾಯಿ ಹೆಚ್ಚಳ ಮಾಡಿಲ್ಲ. ಬಿಜೆಪಿಯವರಿಗೆ ಉದ್ಯಮಿಗಳ ಮೇಲಿರುವ ಪ್ರೀತಿ ಬಡವರ ಮೇಲೆ ಇಲ್ಲ ಎಂದು ಟೀಕಿಸಿದ್ದಾರೆ.