ಕಾರವಾರ: ಸಂಘದ ಸಾಲ ತೀರಿಸಲು ದಂಪತಿ ತಮ್ಮ 20 ದಿನಗಳ ಕಂದಮ್ಮನನ್ನೇ ಮಾರಾಟ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ದೇಶಪಾಂಡೆನಗರದಲ್ಲಿ ನಡೆದಿದೆ.
ಸಂಘದ ಸಾಲ ತೀರಿಸಲು ದಂಪತಿ ನವಜಾತ ಶಿಶುವನ್ನು 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಅನಗೋಳ ನಿವಾಸಿಗಳಾದ ನೂರ್ ಮಹಮ್ಮದ್ ಅಬ್ದುಲ್ ಮಜೀದ್ (47) ಹಾಗೂ ಕಿಶನ್ ಐರೇಕರ್ (42) ಮಗುವನ್ನು ಖರೀದಿಸಿದವರು.
ಜೂನ್ 17ರಂದು ವಸಿಂ ಚಂಡು ಪಟೇಲ್ ಪತ್ನಿ ಮಾಹೀನ್ ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ವಸೀಂ ಹಲವೆಡೆ ಸಾಅಲ ಮಾಡಿಕೊಂಡಿದ್ದ. ಸಾಲ ಕೊಟ್ಟ ಸಂಘದವರು ಸಾಲದ ಹಣ ಮರು ಪಾವತಿಸುವಂತೆ ಬೆನ್ನು ಬಿದ್ದಿದ್ದರು. ಹಾಗಾಗಿ ವಸೀಂ ದಂಪತಿ ಮಗುವನ್ನು ಮಾರಲು ನಿರ್ಧರಿಸಿ ಬೆಳಗಾವಿ ಮೂಲದ ವ್ಯಕ್ತಿಗೆ 3 ಲಕ್ಷಕ್ಕೆ ಮಾರಿದ್ದಾರೆ.
ಬಾಣಂತಿ ಮಾಹೀನ್ ಬಳಿ ಮಗು ಕಾಣದಿದ್ದಾಗ ಅನುಮಾನಗೊಂಡ ಅಂಗನವಾಡಿ ಕಾರ್ಯಕರ್ತೆ ದಾಂಡೇಲಿ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರಿಗೆ ಮಗು ಮಾರಾಟ ಪ್ರಕರಣದ ಬಗ್ಗೆ ಗೊತ್ತಾಗಿದೆ. ಸದ್ಯ ಮಗುವನ್ನು ಖರೀದಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ.