ನೆಲಮಂಗಲ: ಸಾಲದ ವಿಚಾರವಾಗಿ ಯುವತಿಯೊಂದಿಗೆ ಜಗಳ ನಡೆದಿದ್ದು, ಯುವಕರ ಗ್ಯಾಂಗ್ ವೊಂದು ಇಬ್ಬರಿಗೆ ಚಾಕು ಇರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ.
4-5 ಯುವಕರ ಗ್ಯಾಂಗ್ ಇಬ್ಬರಿಗೆ ಚಾಕು ಇರಿದಿದೆ. ಜಗಳ ಬಿಡಿಸಲು ಬಂದಿದ್ದ ಚೇತನ್ ಹಾಗೂ ಯುವತಿಗೆ ಸಾಲ ನೀಡಿದ್ದ ಸಂದೀಪ್ ಗಂಭೀರವಾಗಿ ಗಾಯಗೊಂಡವರು.
ನೆಲಮಂಗಲದ ಜ್ಯೂಸ್ ಸೆಂಟರ್ ನಲ್ಲಿ ಸಂದೀಪ್ ಕೆಲಸ ಮಾಡುತ್ತಿದ್ದ. ಎರಡು ವರ್ಷದ ಹಿಂದೆ ಸಂದೀಪ್ ಗೆ ಯುವತಿಯೊಬ್ಬಳ ಪರಿಚಯವಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ವೇಳೆ ಸಂದೀಪ್ ಯುವತಿಗೆ 2 ಸಾವಿರ ರೂಪಾಯಿ ಸಾಲ ನೀಡಿದ್ದ. ಕೆಲ ತಿಂಗಳ ಹಿಂದೆ ಸಂದೀಪ್ ಹಾಗೂ ಯುವತಿ ನಡುವೆ ಬ್ರೇಕಪ್ ಆಗಿದೆ. ಬಳಿಕ ಸಂದೀಪ್ ತಾನು ಕೊಟ್ಟಿದ್ದ ಸಾಲದ ಹಣ ಹಿಂತಿರುಗಿಸಲು ಕೇಳಿದ್ದ. 2000 ರೂ ಪೈಕಿ 1000 ರೂ ವಾಪಸ್ ನೀಡಿದ್ದಳು. ಉಳಿದ 1000 ರೂಪಾಯಿ ಕೊಡುವಂತೆ ಸಂದೀಪ್ ಫೋನ್ ಮಾಡಿದ್ದ.
ಈ ವಿಚಾರವಾಗಿ ಸಂದೀಪ್ ಬಳಿ ಬಂದ 4-5 ಯುವಕರ ಗ್ಯಾಂಗ್, ಹಣ ಪೂರ್ತಿ ಕೊಟ್ಟರೂ ಮತ್ತೆ ಮತ್ತೆ ಹಣ ಕೊಡಲು ಕೇಳುತ್ತಿದ್ದೀಯಾ? ಎಂದು ಗಲಾಟೆ ಮಾಡಿದ್ದಾರೆ. ಯುವಕರ ಗುಂಪು ಹಾಗೂ ಸಂದೀಪ್ ನಡುವೆ ಜಗಳ ಜೋರಾಗಿದೆ. ಈ ವೇಳೆ ಚೇತನ್ ಎಂಬಾತ ಜಗಳ ಬಿಡಿಸಲು ಬಂದಿದ್ದಾನೆ.
ಯುವಕರ ಗುಂಪು ಚೇತನ್ ಗೆ ಚಾಕು ಇರಿದಿದೆ. ಅಲ್ಲದೇ ಸಂದೀಪ್ ಬೆನ್ನಿಗೂ ಚಾಕು ಇರಿದು ಪರಾರಿಯಾಗಿದೆ. ಇಬ್ಬರು ಗಾಯಾಳುಗಳನ್ನು ನೆಲಮಂಗಲ ಠಾಣೆಗೆ ದಾಖಲಿಸಲಾಗಿದೆ.