ಕಾರವಾರ: ಸಾಲ ತೀರಿಸಲು 20 ದಿನದ ಮಗುವನ್ನು ಮೂರು ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಕಾನೂನಿಗೆ ವಿರುದ್ಧವಾಗಿ ಮಗು ಖರೀದಿಸಿದ ವ್ಯಕ್ತಿ ಮತ್ತು ಸಹಕರಿಸಿದ ಚಾಲಕನನ್ನು ದಾಂಡೇಲಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆ ಅನಗೋಳದ ನೂರ್ ಅಹಮದ್ ಅಬ್ದುಲ್ ಮಜೀಜಿದ್, ಎಸ್.ಬಿ. ರೋಡ್ ನ ಚಾಲಕ ಕಿಶಾನ್ ಶ್ರೀಕಾಂತ್ ಐರೇಕರ್ ಬಂಧಿತ ಆರೋಪಿಗಳು. ಹಳೇ ದಾಂಡೇಲಿ ಸಾಮಿಲ್ ರಸ್ತೆಯ ಮಾಹಿನ್ ವಸೀಂ ಎಂಬಾಕೆ ಜೂನ್ 17ರಂದು ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವನ್ನು ಜುಲೈ 8ರಂದು ಅನಗೋಳದ ನೂರ್ ಅಹಮದ್ ಗೆ 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ಈ ಬಗ್ಗೆ ಅನುಮಾನಗೊಂಡ ದಾಂಡೇಲಿ ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಪಾವಸ್ಕರ್ ದಾಂಡೇಲಿ ಶಹರ ಠಾಣೆಗೆ ದೂರು ನೀಡಿದ್ದರು.
ಮಾಹಿನ್ ಮತ್ತು ವಸೀಂ ಚಂದು ಪಟೇಲ್ ದಂಪತಿ ಸಾಲ ಮಾಡಿಕೊಂಡಿದ್ದು, ಸಾಲವನ್ನು ತೀರಿಸಲು ಮಗು ಮಾರಾಟ ಮಾಡಿದ್ದಾರೆ ಎಂದು ಗೊತ್ತಾಗಿದೆ. ಮಗುವನ್ನು ಶಿರಸಿಯ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ನಾಪತ್ತೆಯಾಗಿರುವ ದಂಪತಿಗಾಗಿ ಹುಡುಕಾಟ ನಡೆಸಲಾಗಿದೆ.