ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಘೀ, ಚಿಕೂನ್ ಗುನ್ಯಾಗೆ ಕಡಿವಾಣ ಹಾಕುವ ಸಲುವಾಗಿ ಸೊಳ್ಳೆ ನಿರ್ಮೂಲನೆಗೆ ಆರೋಗ್ಯ ಇಲಾಖೆ ಮುಂದಾಗಿದೆ.
ನೀರಿನ ಮೂಲಗಳಲ್ಲಿಯೇ ಲಾರ್ವಾ ನಿರ್ಮೂಲನೆಗೆ ರಾಜ್ಯದಾದ್ಯಂತ 1500 ಸ್ವಯಂಸೇವಕರನ್ನು ನೇಮಿಸಿ ಪ್ರತಿದಿನ 400 ರೂಪಾಯಿ ಕೂಲಿ ನೀಡಲು ಆರು ಕೋಟಿ ರೂಪಾಯಿ ವೆಚ್ಚ ಸೇರಿದಂತೆ ರೋಗ ನಿಯಂತ್ರಣಕ್ಕೆ ವಿವಿಧ ಕ್ರಮಗಳಿಗೆ ಒಟ್ಟು 7.25 ಕೋಟಿ ರೂಪಾಯಿ ವೆಚ್ಚ ಮಾಡುವ ಪ್ರಸ್ತಾಪಕ್ಕೆ ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ.
ಈ ಯೋಜನೆಯಡಿ ನೀರಿನಲ್ಲಿರುವ ಲಾರ್ವಾ ನಿರ್ಮೂಲನೆಗೆ 100 ದಿನದ ಮಟ್ಟಿಗೆ 1,500 ಸ್ವಯಂಸೇವಕರನ್ನು ನೇಮಕ ಮಾಡಿಕೊಳ್ಳಲು 6 ಕೋಟಿ ರೂ. ವೆಚ್ಚಕ್ಕೆ ಅವಕಾಶ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳು, ಜಿಲ್ಲೆ, ತಾಲೂಕು ಮಟ್ಟದಲ್ಲಿ ಪ್ರತಿದಿನ 400 ರೂ. ಕೂಲಿಯಂತೆ ಸ್ವಯಂ ಸೇವಕರು ಕೆಲಸ ಮಾಡಲಿದ್ದಾರೆ. ನೀರಿನ ಮೂಲಗಳಲ್ಲಿ ಲಾರ್ವಾ ನಿರ್ಮೂಲನೆಗೆ 1500 ಜನರ ನೇಮಕಕ್ಕೆ ನಿರ್ಧರಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಘೀ, ಚಿಕೂನ್ ಗುನ್ಯಾ ಕಾಯಿಲೆ ಹತ್ತಿಕ್ಕಲು ಕ್ರಮ ಕೈಗೊಳ್ಳಲಾಗಿದೆ.
