ಬೆಳಗಾವಿ: ಶ್ರೀರಾಮಸೇನೆಯ ಧಾರವಾಡ ಜಿಲ್ಲಾಧ್ಯಕ್ಷರ ಮೇಲೆ ದೇವಸ್ಥಾನದಲ್ಲಿದ್ದಾಗಲೇ ಹಲ್ಲೆ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಾಲಯದಲ್ಲಿ ನಡೆದಿದೆ.
ಅಣ್ಣಪ್ಪ ಮಾರಣಾಂತಿಕ ಹಲ್ಲೆಗೊಳಗಾದ ಶ್ರೀರಾಮಸೇನೆ ಧಾರವಾಡ ಜಿಲ್ಲಾಧ್ಯಕ್ಷ. ಸವದತ್ತಿ ಯೆಲ್ಲಮ್ಮ ದೇವಿ ದರ್ಶನಕ್ಕೆಂದು ಪತ್ನಿ ಹಾಗೂ ಮಗುವಿನೊಂದಿಗೆ ಅಣ್ಣಪ್ಪ ಬಂದಿದ್ದರು. ಈ ವೇಳೆ ದೇಗುಲದ ಒಳಗೆ ಅಣ್ಣಪ್ಪ ಪತ್ನಿ ಮಗುವಿಗೆ ತಿಂಡಿ ತಿನ್ನಿಸುತ್ತಿದ್ದರು. ದೇವಸ್ಥಾನದ ಒಳಗೆ ತಿಂಡಿ ತಿನ್ನಿಸದಂತೆ ಗೃಹರಕ್ಷಕ ದಳ ಸಿಬ್ಬಂದಿ ಸೂಚಿಸಿದ್ದಾರೆ. ಬಳಿಕ ದೇವಾಲಯದ ಹೊರಗೆ ಬಂದು ಪತಿ-ಪತ್ನಿ ಮಗುವಿಗೆ ತಿಂಡಿ ತಿನ್ನಿಸುತ್ತಿದ್ದರು.
ಈ ವೇಳೆ ಪೊಲೀಸ್ ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅವಾಚ್ಯವಗೈ ನಿಂದಿಸಿದ್ದನ್ನು ಅಣ್ಣಪ್ಪ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ಹಾಗೂ ಅಣ್ಣಪ್ಪ ನಡುವೆ ಮಾತಿಗೆ ಮಾತು ಬೆಳೆದಿದೆ. ಕಾನ್ಸ್ ಟೇಬಲ್ ನಾಗನಗೌಡರ್ ಎಂಬುವವರು ಅಣ್ಣಪ್ಪ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಣ್ಣಪ್ಪ ಅವರ ತಲೆಯಿಂದ ರಕ್ತ ಸೋರುವಂತೆ ಹಲ್ಲೆ ನಡೆಸಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಅಣ್ಣಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.