ಮೈಸೂರು: ದೇವನಹಳ್ಳಿ ರೈತರ ಹೋರಾಟದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ತಪ್ಪಿದ್ದಾರೆ. ಜುಲೈ 15ರವರೆಗೆ ಕಾಲಾವಕಾಶ ಕೇಳಿರುವ ಸಿಎಂ ಸಿದ್ದರಾಮಯ್ಯ, ದೆಹಲಿಗೆ ತೆರಳಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡುವ ಮೂಲಕ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ನಟ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.
ದೇವನಹಳ್ಳಿಯಲ್ಲಿ ರೈತರ ಭೂಮಿ ಕಿತ್ತುಕೊಂಡು ಅಲ್ಲಿ 1700 ಎಕರೆಯಲ್ಲಿ ಡಿಫೆನ್ಸ್ ಕಾರಿಡಾರ್ ಸ್ಥಾಪನೆಗೆ ರಾಜ್ಯ ಸರ್ಕಾರ ಈಗ ಕೇಂದ್ರದ ಅನುಮತಿ ಕೇಳಿದೆ. ಕಾರಿಡಾರ್ ಗೆ ಏಕೆ ಇಷ್ಟು ಜಮೀನು ಬೇಕು? ಎಂಬುದನ್ನು ನಕ್ಷೆ ಸಮೇತ ವಿವರಿಸಲಿ ಎಂದು ಹೇಳಿದರು.
ಕಾರಿಡಾರ್ ಗೆ ಕೇವಲ 100 ಎಕರೆ ಬಳಸಿ ಉಳಿದ ಜಮೀನಿನಲ್ಲಿ ಐಷಾರಾಮಿ ಹೋಟೆಲ್ ಕಟ್ಟುತ್ತಾರೆ. ಅಲ್ಲಿ ನಮ್ಮ ರೈತರು ಕೂಲಿಯಾಳುಗಳಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಯಾರೋ ಮೂವರು ರೈತರನ್ನು ಮಧ್ಯ ಕರೆತಂದು ಚಳುವಳಿ ಒಡೆಯುವ ಪ್ರಯತ್ನ ಮಾಡುತ್ತಿದೆ. ಹಳ್ಳಿಗಳಿಗೆ ಪುಡಾರಿಗಳನ್ನು ಕಳುಹಿಸಿ ಹೆದರಿಸುತ್ತಿದೆ. ಹಸಿರು ವಲಯ ಮಾಡುತ್ತೇನೆ ಎಂದು ನಾಟಕವಾಡಿ ಜನರನ್ನು ಹೆದರಿಸುತ್ತಿದೆ. ನಿಮ್ಮ ನಾಟಕ ನಮ್ಮೆಲ್ಲರ ಕಣ್ಣಿಗೆ ಕಾಣುತ್ತಿದೆ. ಜುಲೈ 15ರಂದು ರೈತ ಪರ ನಿರ್ಧಾರ ಪ್ರಕಟಿಸದೇ ಇದ್ದರೆ ಉಗ್ರ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.