ದುನಿಯಾ ಡಿಜಿಟಲ್ ಡೆಸ್ಕ್ : ಬಾಲ್ಯ ವಿವಾಹ ನಿಷೇದ ಕಾಯ್ದೆಯಡಿ ಅಪ್ರಾಪ್ತ ಮಕ್ಕಳ ಬಾಲ್ಯ ವಿವಾಹ ಮಾತ್ರವಲ್ಲದೇ, ನಿಶ್ಚಿತಾರ್ಥವನ್ನೂ ಸಹ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಚಿತ್ರದುರ್ಗದ ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಮಂಜುಳಾ.ವಿ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಜೆಜೆಹಟ್ಟಿ ಅಂಗನವಾಡಿ ಕೇಂದ್ರ ಹಾಗೂ ಮಲ್ಲನಕಟ್ಟೆಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಕಚೇರಿ ವತಿಯಿಂದ ಆಯೋಜಿಸಲಾದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷ ತುಂಬುವರೆಗೂ ಯಾರು ಕೂಡ ವಿವಾಹ ಮಾಡಬಾರದು. ಒಂದು ವೇಳೆ ಬಾಲ್ಯ ವಿವಾಹ ಮಾಡಿದರೆ ಶಿಕ್ಷೆಗೆ ಗುರಿಯಾಗಬೇಕಾಗಿರುತ್ತದೆ ಎಂದು ತಿಳಿಸಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಮಾರಾಟ, ಗೊಲ್ಲರಹಟ್ಟಿಗಳಲ್ಲಿ ಆಚರಿಸುವ ಮೌಡ್ಯ ಪದ್ಧತಿಯ ಆಚರಣೆ, ಬಾಲ್ಯ ವಿವಾಹದಿಂದ ಆಗುವ ಆರೋಗ್ಯದ ಸಮಸ್ಯೆಗಳನ್ನು ಕುರಿತು ಜಾಗೃತಿ ಮಾಡಿಸಲಾಯಿತು.ಪೊಲೀಸ್ ಕಾನ್ಸಟೇಬಲ್ ಭಾಗ್ಯ, ಎನ್ಜಿಓ ಸಂಸ್ಥಯ ಹರ್ಷ, ಜೆಂಡರ್ ಸ್ಪೆಶಲಿಸ್ಟ್ ಗೀತಾ, ಸೇರಿದಂತೆ ಶಾಲಾ ಮುಖ್ಯೋಪಾಧ್ಯಾಯರು, ಎ.ಎನ್.ಎಂ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಉಪಸ್ಥಿತರಿದ್ದರು.