ಅಮೆರಿಕದ ಕನ್ಸಾಸ್ ಸಿಟಿಯ ಪಾಪೈಸ್ (ಬಹುರಾಷ್ಟ್ರೀಯ ಫ್ರೈಡ್ ಚಿಕನ್ ರೆಸ್ಟೋರೆಂಟ್) ಮಳಿಗೆಯೊಂದರಲ್ಲಿ ಗ್ರಾಹಕರೊಬ್ಬರು ತಮ್ಮ ಪತ್ನಿಗೆ ಸಿಬ್ಬಂದಿ ನೀಡಿದ ಹೊಗಳಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ಪಾಪೈಸ್ ಸಿಬ್ಬಂದಿ ತಮ್ಮ ಪತ್ನಿಯನ್ನು “ಸುಂದರಿ” ಎಂದು ಕರೆದಿದ್ದಾರೆ ಎಂದು ಆರೋಪಿಸಿ, ಈ ಬಗ್ಗೆ ಪ್ರಶ್ನಿಸುವುದು ಕಂಡುಬರುತ್ತದೆ. ಪರಿಸ್ಥಿತಿ ತಾರಕಕ್ಕೇರುತ್ತದೆ, ವ್ಯಕ್ತಿ ಪದೇ ಪದೇ “ನೀವು ಹಾಗೆ ಹೇಳಿದ್ದು ಯಾಕೆ?” ಎಂದು ಪ್ರಶ್ನಿಸುತ್ತಾರೆ. ನೌಕರರು ಆಶ್ಚರ್ಯಚಕಿತರಾಗಿದ್ದರೂ, ಅವರು ಮತ್ತು ಅವರ ಸಹೋದ್ಯೋಗಿಗಳು ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ, ಆದರೆ ಪತಿ ಇನ್ನಷ್ಟು ಆಕ್ರೋಶಗೊಳ್ಳುತ್ತಾರೆ.
ಒಂದು ಹಂತದಲ್ಲಿ, ಆ ವ್ಯಕ್ತಿ, “ಇದು ಭಾರತವಲ್ಲ” ಎಂದು ಹೇಳಿದ್ದು, ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ್ದು, ಈ ಹೊಗಳಿಕೆ ಎಲ್ಲೆಯನ್ನು ಮೀರಿತ್ತೇ ಅಥವಾ ಕೇವಲ ಸೌಜನ್ಯದ ಗೆಸ್ಚರ್ ಆಗಿತ್ತೇ ಎಂಬ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಅನೇಕ ವೀಕ್ಷಕರು ಪತಿಯ ಪ್ರತಿಕ್ರಿಯೆ ಅತಿರೇಕವಾಗಿತ್ತು ಎಂದು ಭಾವಿಸಿದರೆ, ಇನ್ನು ಕೆಲವರು ಅವರ ಅಸಮಾಧಾನವನ್ನು ಅರ್ಥಮಾಡಿಕೊಂಡಿದ್ದು, ಈ ಕ್ಷಣ ಅವರಿಗೆ ಸೂಕ್ತವಲ್ಲ ಎಂದು ಅನಿಸಿರಬಹುದು ಎಂದಿದ್ದಾರೆ.