ಕೊಲ್ಕತ್ತಾ: ಗುರುವಾರ ತಡರಾತ್ರಿ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಭೀಕರ ಹತ್ಯೆ ನಡೆದಿದೆ. ತೃಣಮೂಲ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಜಾಕ್ ಖಾನ್ ಅವರನ್ನು ಭಂಗಾರ್ ನ ಚಲತಬೇರಿಯಾ ಪ್ರದೇಶದಲ್ಲಿ ಗುಂಡಿಕ್ಕಿ ಕೊಂದು ಹಾಕಲಾಗಿದೆ.
ರಾತ್ರಿ 10 ಗಂಟೆ ಸುಮಾರಿಗೆ ಖಾನ್ ಭಂಗಾರ್ ಬಜಾರ್‌ನಿಂದ ಮಾರಿಚಾಗೆ ಮನೆಗೆ ಹಿಂತಿರುಗುತ್ತಿದ್ದಾಗ ಕಾಲುವೆಯ ಬಳಿ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ದಾಳಿಕೋರರು ಮೊದಲು ರಜಾಕ್ ಖಾನ್ ಮೇಲೆ ಗುಂಡು ಹಾರಿಸಿದರು ಮತ್ತು ನಂತರ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಅವರು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ವಲ್ಪ ಸಮಯದ ನಂತರ ಕಾಶಿಪುರ ಪೊಲೀಸ್ ಠಾಣೆ ತಂಡ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದೆ.