ಹಾಸನ: ಆಸ್ತಿ ವಿಚಾರವಾಗಿ ಜಗಳವಾಗಿ ಮಗನೇ ತಂದೆ ಹಾಗೂ ಸಹೋದರನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಹಾಸನದಲ್ಲಿ ನಡೆದಿದೆ.
ಇಲ್ಲಿನ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಂದೆ ದೇವೇಗೌಡ (70) ಹಾಗೂ ಸಹೋದರ ಮಂಜುನಾಥ್ (50) ನನ್ನು ಮೋಹನ್ ಹತ್ಯೆಗೈದಿದ್ದಾನೆ.
ಮಂಜುನಾಥ್ ಹಗೂ ಮೋಹನ್ ಇಬ್ಬರೂ ವಿವಾಹವಾಗಿರಲಿಲ್ಲ. ಮಂಜುನಾಥ್ ತಂದೆ-ತಾಯಿ ಜೊತೆ ವಾಸವಾಗಿದ್ದ. ಮೋಹನ್ ಒಂದೇ ಮನೆಯಲ್ಲಿದ್ದರೂ ಪ್ರತ್ಯೇಕವಾಗಿ ವಾಸವಾಗಿದ್ದ. ತಂದೆ ದೇವೇಗೌಡ ಕೆಲ ದಿನಗಳ ಹಿಂದೆ ಆಸ್ತಿ ಮಾರಾಟ ಮಾಡಿದ್ದರು. ಆಸ್ತಿ ಮಾರಿದ ಹಣ ತನಗೂ ನೀಡಿಲ್ಲ ಎಂಬ ಕಾರಣಕ್ಕೆ ಮೋಹನ್ ಕ್ಯಾತೆ ತೆಗೆದಿದ್ದ. ಇದೇ ಕಾರಣಕ್ಕೆ ಜಗಳವಾಗಿ ಮಧ್ಯರಾತ್ರಿ ಮಲಗಿದ್ದ ಸಹೋದರ ಮಂಜುನಾಥ್ ನನ್ನು ಮಚ್ಚಿನಿಂದ ಹೊಡೆದಿದ್ದಾನೆ. ಈ ವೇಳೆ ತಂದೆ ತಡೆಯಲು ಬಂದಿದ್ದಾರೆ. ಈ ವೇಳೆ ತಂದೆಯ ಮೇಲೂ ಹಲ್ಲೆ ನಡೆಸಿದ್ದಾನೆ.
ತಡೆಯಲು ಬಂದ ತಾಯಿ ಮೇಲೂ ಹಲ್ಲೆ ನಡೆಸಿದ್ದಾನೆ. ತಾಯಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಈ ವೇಳೆ ತಂದೆ ಹಾಗೂ ಸಹೋದರ ಇಬ್ಬರನ್ನೂ ಹತ್ಯೆಗೈದ ಆರೋಪಿ ತಾನು ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಳಿಕ ಅಕ್ಕನಿಗೆ ಕರೆ ಮಾಡಿ ತಾನು ಕೊಲೆ ಮಾಡಿರುವ ವಿಚಾರ ಹೇಳಿದ್ದಾನೆ.
ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮೋಹನ್ ನನ್ನು ಪೊಲೀಸರು ಬಂಧಿಸಿದ್ದಾರೆ.