ಯಾದಗಿರಿ: ಜಾತಿ ನಿಂದನೆಗೆ ಹೆದರಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ವಿಷಯ ತಿಳಿದು ಆಘಾತಕ್ಕೊಳಗಾದ ಆತನ ತಂದೆ ಕೂಡ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಜಮೀನಿನ ದಾರಿ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳವಾಗಿ ಹಿರಿಯರು ನ್ಯಾಯಪಂಚಾಯಿತಿ ಮಾಡಿ ಬಗೆಹರಿಸಿದ್ದರು. ಆದರೆ ಯುವಕನ ವಿರುದ್ಧ ಕೆಲವರು ಜಾತಿ ನಿಂದನೆ ಮಾಡಿ ಜೈಲಿಗೆ ಕಳುಹಿಸುವುದಾಗಿ ಹೆದರಿಸಿದ್ದರು. ಜೈಲಿಗೆ ಹೋದರೆ ಮರ್ಯಾದೆ ಹೋಗುತ್ತೆ ಎಂದು ಭಯಗೊಂಡು ಯುವಕ ಮೆಹಬೂಬ್ (22) ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಗ ಆತ್ಮಹತ್ಯೆ ಮಾಡಿಕೊಂಡ ವಿಷಯ ಕೇಳಿ ಆಘಾತಗೊಂಡ ಆತನ ತಂದೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಒಂದೇ ಮನೆಯಲ್ಲಿ ಒಂದೇ ದಿನ ಎರಡು ಸಾವಾಗಿದ್ದು, ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.