ಡಿಜಿಟಲ್ ಡೆಸ್ಕ್ : ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಉದ್ಯೋಗ ಆಧಾರಿತ ಪ್ರೋತ್ಸಾಹಧನ (ಇಎಲ್ಐ) ಯೋಜನೆಗೆ ಅನುಮೋದನೆ ನೀಡಿದ್ದು, ಉದ್ಯೋಗ ಸೃಷ್ಠಿ ಮತ್ತು ಎಲ್ಲಾ ಉತ್ಪಾದನಾ ವಲಯಗಳಲ್ಲಿ ಉದ್ಯೋಗಾವಕಾಶ ಮತ್ತು ಸಾಮಾಜಿಕ ಭದ್ರತೆ ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಓ) ಬಳ್ಳಾರಿ ಪ್ರಾದೇಶಿಕ ಕಚೇರಿಯ ಆಯುಕ್ತ ಕೆ.ವಿ.ಪ್ರವೀಣ್ ಅವರು ಹೇಳಿದರು.
ಮಂಗಳವಾರ ನಗರದ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಓ) ಬಳ್ಳಾರಿ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಓ) ಬಳ್ಳಾರಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ಕೊಪ್ಪಳ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕಾ ವಲಯ ಮತ್ತು ಇತರೆ ವಲಯಗಳ ಹೊಸ ಉದ್ಯೋಗಿಗಳು ಹಾಗೂ ಉದ್ಯೋಗಿಗಳಿಗೆ ಕೆಲಸ ನೀಡಿದ ಉದ್ಯೋಗದಾತರು ಇಬ್ಬರಿಗೂ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ ಎಂದರು.ಉದ್ಯೋಗ ಆಧಾರಿತ ಪ್ರೋತ್ಸಾಹಧನ ಯೋಜನೆಯ ಭಾಗವಾಗಿ ಹೊಸದಾಗಿ ಉದ್ಯೋಗದಲ್ಲಿರುವ ವ್ಯಕ್ತಿಗಳು ಹಾಗೂ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ಯೋಗದಾತರು ಕೇಂದ್ರ ಸರ್ಕಾರದ ಪ್ರೋತ್ಸಾಹಕಗಳಿಂದ ಪ್ರಯೋಜನ ಪಡೆಯುತ್ತಾರೆ ಎಂದು ತಿಳಿಸಿದರು.
ಈ ಯೋಜನೆಯನ್ನು 2024–25ರ ಕೇಂದ್ರ ಬಜೆಟ್ನಲ್ಲಿ ಪರಿಚಯಿಸಲಾಯಿತು. ಯುವಕರಿಗೆ ಉದ್ಯೋಗ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸುವ ಸಲುವಾಗಿ ಜಾರಿಗೊಳಿಸಲಾಯಿತು. ಈ ಯೋಜನೆಯ ಪ್ರಯೋಜನವು 2025 ರ ಆಗಸ್ಟ್ 01 ರಿಂದ 2027 ರ ಜುಲೈ 31 ರ ನಡುವೆ ಸೃಷ್ಟಿಯಾದ ಉದ್ಯೋಗಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದರು.
ಇಪಿಎಫ್ಓ ಕಚೇರಿ ವತಿಯಿಂದ ಈಗಾಗಲೇ ಪ್ರತಿ ತಿಂಗಳು ಆಯೋಜಿಸುತ್ತಿರುವ ‘ನಿಧಿ ಆಪ್ಕೆ ನಿಕಟ್’ ಕಾರ್ಯಕ್ರಮದಲ್ಲಿ ಯೋಜನೆಯ ಕುರಿತು ಅರಿವು ಮೂಡಿಸಲಾಗುವುದು ಹಾಗೂ ತಾಲ್ಲೂಕು ಮಟ್ಟದಲ್ಲಿ ಜಾಗೃತಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಓ) ಬಳ್ಳಾರಿ ಪ್ರಾದೇಶಿಕ ಕಚೇರಿಯ ಆರ್ಥಿಕ ನಿರ್ವಹಣಾಧಿಕಾರಿ ಕೆ.ಎಸ್.ವೇಣುಗೋಪಾಲ್ ಅವರು ಮಾತನಾಡಿ, ಈ ಯೋಜನೆಯಡಿ ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರಿಗೆ 2 ಕಂತುಗಳಲ್ಲಿ ರೂ.15,000 ವರೆಗಿನ 1 ತಿಂಗಳ ವೇತನ ನೀಡಲಾಗುವುದು. ಹೊಸ ಉದ್ಯೋಗಿಯ ಸೇರ್ಪಡೆಗಾಗಿ ಉದ್ಯೋಗದಾತರಿಗೆ 2 ವರ್ಷಗಳವರೆಗೆ ತಿಂಗಳಿಗೆ ಗರಿಷ್ಟ 3,000 ರೂ.ಗಳ ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದರು.
ಈ ಯೋಜನೆಯು ಎರಡು ಭಾಗಗಳನ್ನು ಒಳಗೊಂಡಿದ್ದು, ʻಭಾಗ-ಎʼ ಮೊದಲ ಬಾರಿಗೆ ಕೆಲಸ ಮಾಡುವವರ ಮೇಲೆ ಗಮನ ಕೇಂದ್ರೀಕರಿಸಿದರೆ ʻಭಾಗ-ಬಿʼ ಉದ್ಯೋಗದಾತರ ಮೇಲೆ ಗಮನ ಕೇಂದ್ರೀಕರಿಸಿದೆ ಎಂದರು.
ಭಾಗ ಎ: ಮೊದಲ ಬಾರಿಯ ಉದ್ಯೋಗಿಗಳಿಗೆ ಪ್ರೋತ್ಸಾಹ:
ಈ ಭಾಗವು ʻಇಪಿಎಫ್ಒ’ ನಲ್ಲಿ ನೋಂದಾಯಿತರಾದ ಮೊದಲ ಬಾರಿಯ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದ್ದು, ಈ ಯೋಜನೆಯ ಸಾಮಾಜಿಕ ಭದ್ರತೆಯ ಮೂಲಕ ಸುರಕ್ಷತಾ ಜಾಲವನ್ನು ಒದಗಿಸುತ್ತದೆ ಮತ್ತು ಔಪಚಾರಿಕ ಆರ್ಥಿಕತೆಗೆ ಸಂಯೋಜಿಸಲು ಅವರಿಗೆ ಸಹಾಯ ಮಾಡುತ್ತದೆ. 1 ಲಕ್ಷ ರೂ.ವರೆಗೆ ಮಾಸಿಕ ವೇತನ ಪಡೆಯುವ ಉದ್ಯೋಗಿಗಳು ಅರ್ಹರಾಗಿರುತ್ತಾರೆ.
ಪ್ರತಿಯೊಬ್ಬ ಅರ್ಹ ಉದ್ಯೋಗಿಗೆ ಒಂದು ತಿಂಗಳ ಇಪಿಎಫ್ ವೇತನ (ರೂ. 15,000 ವರೆಗೆ) ಎರಡು ಕಂತುಗಳಲ್ಲಿ ಲಭಿಸಲಿದೆ. ಆರು ತಿಂಗಳ ನಿರಂತರ ಸೇವೆಯ ನಂತರ ಮೊದಲ ಕಂತನ್ನು ವಿತರಿಸಲಾಗುತ್ತದೆ. 12 ತಿಂಗಳ ನಂತರ ಮತ್ತು ಕಡ್ಡಾಯ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಪೂರ್ಣಗೊಂಡ ನಂತರ ಎರಡನೇ ಕಂತನ್ನು ಬಿಡುಗಡೆ ಮಾಡಲಾಗುತ್ತದೆ. ದೀರ್ಘಕಾಲೀನ ಹಣಕಾಸು ಯೋಜನೆಯನ್ನು ಉತ್ತೇಜಿಸಲು ಪ್ರೋತ್ಸಾಹದ ಒಂದು ಭಾಗವನ್ನು ಉಳಿತಾಯ ಸಾಧನ ಅಥವಾ ಠೇವಣಿ ಖಾತೆಯಲ್ಲಿ ಇಡಲಾಗುತ್ತದೆ.
ಭಾಗ ಬಿ: ಉದ್ಯೋಗದಾತರಿಗೆ ಬೆಂಬಲ:
ಈ ಭಾಗವು ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಯತ್ತ ಗಮನ ಹರಿಸುತ್ತದೆಯಾದರೂ, ಉತ್ಪಾದನಾ ವಲಯದ ಮೇಲೆ ವಿಶೇಷವಾಗಿ ಗಮನ ಕೇಂದ್ರೀಕರಿಸುತ್ತದೆ. ಗರಿಷ್ಟ 1 ಲಕ್ಷ ರೂ.ವರೆಗಿನ ವೇತನ ಹೊಂದಿರುವ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಉದ್ಯೋಗದಾತರು ಈ ಪ್ರೋತ್ಸಾಹಧನವನ್ನು ಪಡೆಯುತ್ತಾರೆ.
ಕನಿಷ್ಠ ಆರು ತಿಂಗಳವರೆಗೆ ನಿರಂತರ ಉದ್ಯೋಗ ಹೊಂದಿರುವ ಪ್ರತಿ ಹೆಚ್ಚುವರಿ ಉದ್ಯೋಗಿಗೆ ಸರ್ಕಾರವು ಎರಡು ವರ್ಷಗಳವರೆಗೆ ತಿಂಗಳಿಗೆ 3,000 ರೂ.ಗಳವರೆಗೆ ಪ್ರೋತ್ಸಾಹಧನ ನೀಡುವ ಮೂಲಕ ಉದ್ಯೋಗದಾತರನ್ನು ಪ್ರೋತ್ಸಾಹಿಸುತ್ತದೆ. ಉತ್ಪಾದನಾ ವಲಯಕ್ಕೆ, ಪ್ರೋತ್ಸಾಹಕಗಳನ್ನು 3 ಮತ್ತು 4 ನೇ ವರ್ಷಗಳಿಗೂ ವಿಸ್ತರಿಸಲಾಗುವುದು.
ಉದ್ಯೋಗದಾತರಿಗೆ ದೊರೆಯುವ ಪ್ರೋತ್ಸಾಹಧನವು ನೇಮಕಗೊಂಡ ಪ್ರತಿ ಹೊಸ ಉದ್ಯೋಗಿಗೆ ಉದ್ಯೋಗದಾತರು ಮಾಸಿಕ ಪ್ರೋತ್ಸಾಹ ಧನವನ್ನು ಪಡೆಯುತ್ತಾರೆ.
10,000 ರೂ. ವರೆಗಿನ ಸಂಬಳಕ್ಕೆ 1,000 ರೂ., 10,001 ರೂ. ರಿಂದ 20,000 ರೂ. ವರೆಗಿನ ಸಂಬಳಕ್ಕೆ 2,000 ರೂ., 20,000 ರೂ. ಕ್ಕಿಂತ ಹೆಚ್ಚಿನ ಸಂಬಳಕ್ಕೆ 3,000 ರೂ. (ರೂ. 1 ಲಕ್ಷದವರೆಗೆ) ಉದ್ಯೋಗದಾತರು ಪ್ರೋತ್ಸಾಹಧನ ಪಡೆಯಲು ಅರ್ಹತಾ ಮಾನಡಂಡಗಳನ್ನು ಹೊಂದಿರಬೇಕು.
ಕನಿಷ್ಠ 2 ಹೊಸ ಉದ್ಯೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು (ಒಟ್ಟು 50 ಸಿಬ್ಬಂದಿ ಇದ್ದ ಪಕ್ಷದಲ್ಲಿ). ಕನಿಷ್ಠ 5 ಹೊಸ ಉದ್ಯೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು (ಒಟ್ಟು 50 ಸಿಬ್ಬಂದಿ ಅಥವಾ ಅದಕ್ಕಿಂತ ಹೆಚ್ಚು ಇದ್ದಲ್ಲಿ).
ಯೋಜನೆಯ ಅನುಷ್ಠಾನ
ಉದ್ಯೋಗ ಆಧಾರಿತ ಪ್ರೋತ್ಸಾಹಧನ ಯೋಜನೆಯಡಿ ಎಲ್ಲಾ ವಿತರಣೆಗಳು ಪಾರದರ್ಶಕತೆ ಮತ್ತು ದಕ್ಷತೆಗಾಗಿ ನೇರ ನಗದು ವರ್ಗಾವಣೆ (ಡಿಬಿಟಿ) ಮಾದರಿ ಅನುಸರಿಸುತ್ತದೆ. ಉದ್ಯೋಗಿಗಳಿಗೆ ಪಾವತಿಗಳನ್ನು (ಭಾಗ ಎ) ಆಧಾರ್ ಸಂಯೋಜಿತ ಪಾವತಿ ವ್ಯವಸ್ಥೆ (ಎಬಿಪಿಎಸ್) ಮೂಲಕ ರವಾನಿಸಲಾಗುತ್ತದೆ. ಉದ್ಯೋಗಿ ಪ್ರೋತ್ಸಾಹಕಗಳನ್ನು (ಭಾಗ ಬಿ) ನೇರವಾಗಿ ಪಾನ್-ಸಂಬಂಧಿತ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಉದ್ಯೋಗದಾತ ಮತ್ತು ಉದ್ಯೋಗಿ ಪ್ರಯೋಜನಗಳು ಎರಡೂ ನಿರಂತರತೆ ಮತ್ತು ಅನುಸರಣೆಗೆ ಸಂಬಂಧಿಸಿರುವುದರಿಂದ, ಪ್ರೋತ್ಸಾಹಕ-ಸಂಬಂಧಿತ ಮಾದರಿಯು ನಿರಂತರ ಉದ್ಯೋಗವನ್ನು ಪ್ರೋತ್ಸಾಹಿಸುತ್ತದೆ ಮತ್ತು ದುರುಪಯೋಗವನ್ನು ಕಡಿಮೆ ಮಾಡುತ್ತದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಭವಿಷ್ಯ ನಿಧಿ ಪ್ರಾದೇಶಿಕ ಕಚೇರಿಯ ಸಹಾಯಕ ಆಯುಕ್ತ ಟಿ.ನಂದನ್ ಸಿಂಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.