ಮಂಡ್ಯ: ಎಂಸಿಎ ಪದವೀಧರೆ ಯುವತಿಯೊಬ್ಬರು ಕಾವೇರಿ ನದಿಗೆ ಹಾರಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ಉತ್ತರ ಕಾವೇರಿ ಸೇತುವೆ ಬಳಿ ಯುವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. 24 ವರ್ಷದ ಸಿಂಚನಾ ಆತ್ಮಹತ್ಯೆಗೆ ಶರಣಾದ ಯುವತಿ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಪ್ರಸಾದಹಳ್ಳಿ ಗ್ರಾಮದ ಮಂಜುನಾಥ್ ಎಂಬುವವರ ಪುತ್ರಿ.
ಸಿಂಚನಾ ಕೆಲ ವರ್ಷಗಳಿಂದ ಪಿಸಿಓಡಿ ಸಮಸ್ಯೆಯಿಂದ ಬಳಲುತ್ತಿದ್ದಳು. ಇದೇ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದಳು. ಮಂಗಳವಾರ ಸಂಜೆ ಮನೆಯಿಂದ ಹೊರಣ ಯುವತಿ ನಾಪತ್ತೆಯಾಗಿದ್ದಳು. ಹಾಸನದ ಮೂಲಕ ಚನ್ನರಾಯಪಟ್ಟಣ ಮಾರ್ಗವಾಗಿ ಶ್ರೀರಂಗಪಟ್ಟಣಕ್ಕೆ ಬಸ್ಸಿನಲ್ಲಿ ಬಂದ ಯುವತಿ ಕಾವೇರಿ ನದಿಗೆ ಹಾರಿದ್ದಾರೆ.
ಯುವತಿ ನದಿಗೆ ಹಾರಿದ್ದನ್ನು ಕಂಡ ಸ್ಥಳೀಯರೊಬ್ಬರು ತಕ್ಷಣ ಶ್ರೀರಂಗಪಟ್ಟಣ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದರೂ ಯುವತಿ ಪತ್ತೆಯಾಗಿಲ್ಲ. ಸೇತುವೆ ಬಳಿ ಬ್ಯಾಗ್, ಆಧಾರ್ ಕಾರ್ಡ್, ಚಪ್ಪಲಿಗಳು ಸಿಕ್ಕಿದ್ದು, ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಯುವತಿಯ ಕುಟುಂಬಕ್ಕೆ ಮಾಹಿತಿ ರವಾನಿಸಲಾಗಿದೆ. ಇಂದು ಮುಂಜಾನೆಯಿಂದಲೇ ಯುವತಿಗಾಗಿ ನದಿಯಲ್ಲಿ ಶೋಧಕಾರ್ಯ ನಡೆಸಲಾಗುತ್ತಿದೆ.