ಬೆಂಗಳೂರು: ಶಾಲಾ ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಜಾರಿಗೆ ಸರ್ಕಾರದ ಹಂತದಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಕರಡು ಪ್ರಸ್ತಾವನೆಗೆ ಅಂತಿಮ ಸ್ಪರ್ಶ ನೀಡುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ ದ್ವಿಭಾಷಾ ನೀತಿ ಅನುಷ್ಠಾನವಾಗುವ ಸಾಧ್ಯತೆ ಇದೆ.
ಹಿಂದಿ ಭಾಷೆ ಹೇರಿಕೆ ವಿರುದ್ಧ ತಮಿಳುನಾಡು ನಿರಂತರ ಹೋರಾಟ ನಡೆಸಿದೆ. ಮಹಾರಾಷ್ಟ್ರದಲ್ಲಿ ವಿರೋಧದ ಕಾರಣಕ್ಕೆ ತ್ರಿಭಾಷಾ ನೀತಿಯನ್ನು ಕೈ ಬಿಡಲಾಗಿದೆ. ಈ ಬೆಳವಣಿಗೆಗಳ ನಡುವೆ ರಾಜ್ಯ ಸರ್ಕಾರ ಶಾಲಾ ಪಠ್ಯಕ್ರಮದಲ್ಲಿ ದ್ವಿಭಾಷಾ ಪಠ್ಯಕ್ರಮ ಅಳವಡಿಸುವ ಮೂಲಕ ಹಿಂದಿ ಭಾಷೆ ಕೈ ಬಿಡಲು ಮುಂದಾಗಿದ್ದು, ರಾಷ್ಟ್ರೀಯ ನೂತನ ಶಿಕ್ಷಣ ನೀತಿಯನ್ನು ಪ್ರಬಲವಾಗಿ ವಿರೋಧಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ದ್ವಿಭಾಷಾ ಸೂತ್ರಕ್ಕೆ ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ದ್ವಿಭಾಷಾ ನೀತಿಗೆ ತಾವು ಬದ್ಧವೆಂದು ಹೇಳಿದ್ದರು. ರಾಜ್ಯಕ್ಕೆ ದ್ವಿಭಾಷಾ ಸೂತ್ರ ಬೇಕೆನ್ನುವುದು ನನ್ನ ಅಭಿಪ್ರಾಯವಾಗಿದ್ದು, ಸರ್ಕಾರದ ಮಟ್ಟದಲ್ಲಿ, ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಸುವ ಭರವಸೆ ನೀಡಿದ್ದರು.
ಹಿಂದಿ ಹೇರಿಕೆ ವಿರುದ್ಧ ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿವೆ. ತಮಿಳುನಾಡು, ಮಹಾರಾಷ್ಟ್ರ ಮಾದರಿಯಲ್ಲಿ ದ್ವಿಭಾಷಾ ನೀತಿ ಜಾರಿಗೆ ಒತ್ತಾಯಿಸುತ್ತಿವೆ. ಸಿಎಂ ಕೂಡ ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ಆಸಕ್ತಿ ವಹಿಸಿದ್ದು, ಅವರ ಸೂಚನೆಯಂತೆ ಈ ನಿಟ್ಟಿನಲ್ಲಿ ಕರಡು ಪ್ರಸ್ತಾವನೆ ಸಿದ್ಧವಾಗಿದೆ ಎನ್ನಲಾಗಿದೆ.