ಮಂಡ್ಯ : ಗೋಲ್ಡ್ ಲೋನ್ ಹೆಸರಲ್ಲಿ 70 ಕ್ಕೂ ಹೆಚ್ಚು ಜನರಿಗೆ ಕೋಟ್ಯಾಂತರ ಹಣ ವಂಚನೆ ಎಸಗಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಡಿಮೆ ಬಡ್ಡಿಗೆ ಚಿನ್ನಾಭರಣ ಸಾಲ ಕೊಡುತ್ತೇವೆ ಎಂದು ಅಮಾಯಕರನ್ನು ನಂಬಿಸಿ ವಂಚನೆ ಎಸಗುತ್ತಿದ್ದ ಗ್ಯಾಂಗ್ ಇದೀಗ ಅಂದರ್ ಆಗಿದೆ.
ಬ್ಯಾಂಕ್ ಗಳಲ್ಲಿ ಚಿನ್ನಾಭರಣ ಅಡವಿಟ್ಟ ಜನರನ್ನು ಟಾರ್ಗೆಟ್ ಮಾಡುವ ಈ ಗ್ಯಾಂಗ್ ಅಂತಹ ವ್ಯಕ್ತಿಗಳನ್ನು ಟೆಲಿಕಾಲರ್ ಮೂಲಕ ಸಂಪರ್ಕಿಸಿ ಮೋಸ ಮಾಡುತ್ತಾರೆ. ಚಿನ್ನಾಭರಣಗಳನ್ನು ಬಿಡಿಸಿ ನಾವು ನಿಮಗೆ 40 ರಿಂದ 50 ಪೈಸೆ ಬಡ್ಡಿಗೆ ಹಣ ಕೊಡುತ್ತೇವೆ ಎಂದು ನಂಬಿಸುತ್ತಾರೆ. ಇದನ್ನು ನಂಬಿದ ಜನರು ತಮ್ಮ ಒಡವೆಗಳನ್ನು ಬ್ಯಾಂಕ್ಗಳಲ್ಲಿ ಬಿಡಿಸಿ ಈ ಅನಘ ಗೋಲ್ಡ್ನಲ್ಲಿ ಇಟ್ಟಿದ್ದಾರೆ.
ಹಲವು ತಿಂಗಳು ಈ ಅನಘ ಗೋಲ್ಡ್ ಕಂಪನಿ ಜನರನ್ನು ಆಟ ಆಡಿಸಿದೆ. ಘಟನೆ ಸಂಬಂಧ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಗೆ ವಂಚನೆ ಸಂಬಂಧ ದೂರು ನೀಡಿದ್ದಾರೆ.ಮಂಡ್ಯ ಜಿಲ್ಲೆಯಲ್ಲಿ 70 ಕ್ಕೂಅಧಿಕ ಜನರು ವಂಚನೆಗೆ ಒಳಗಾಗಿದ್ದು, ಮೂರು ಕೋಟಿ ರೂ ಮೌಲ್ಯದ 3 ಕೆಜಿ ಚಿನ್ನಾಭರಣ ವಂಚನೆ ಎಸಗಿದ್ದಾರೆ. ಇದೀಗ ಈ ಮೂವರನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳಿಂದ 500 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.