ಬೆಂಗಳೂರು: ಪಡಿತರ ಆಹಾರ ಧಾನ್ಯ ಸಾಗಾಣಿಗೆ ನೀಡಬೇಕಿದ್ದ 244 ಕೋಟಿ ರೂಪಾಯಿ ಬಿಡುಗಡೆಗೆ ರಾಜ್ಯ ಸರ್ಕಾರ ಮಂಗಳವಾರ ಆದೇಶಿಸಿದೆ. ಹೀಗಾಗಿ ಪಡಿತರ ಸಾಗಣೆ ಲಾರಿ ಮಾಲೀಕರ ಅನಿರ್ದಿಷ್ಟ ಮುಷ್ಕರ ಅಂತ್ಯವಾಗಿದ್ದು, ಪಡಿತರ ವಿತರಣೆ ಸುಗಮವಾಗಿ ಪಡಿತರ ಚೀಟಿದಾರರು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ಬಾಕಿ ಇದ್ದ ಪಡಿತರ ಸಾಗಣೆ ಹಣ ಬಿಡುಗಡೆಗೆ ಒತ್ತಾಯಿಸಿ ಪಡಿತರ ಆಹಾರ ಧಾನ್ಯ ಸಾಗಣೆ ಲಾರಿ ಮಾಲೀಕರು ಮುಷ್ಕರ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಫೆಬ್ರವರಿಯಿಂದ ಮೇ ಅಂತ್ಯದವರೆಗೆ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ 5 ಕೆ.ಜಿ ಅಕ್ಕಿ ಖರೀದಿ ಹೊರತುಪಡಿಸಿ ಸಗಟು ಮತ್ತು ಚಿಲ್ಲರೆ ಲಾಭಾಂಶ, ಸಾಗಣೆ ಶುಲ್ಕಗಳಿಗೆ ಪಾವತಿಸಬೇಕಾದ 244.10 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಇದರಿಂದಾಗಿ ಮುಷ್ಕರ ಹಿಂಪಡೆಯುವುದಾಗಿ ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘ ಮತ್ತು ಚಿಲ್ಲರೆ ಸಾರಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ತಿಳಿಸಿದ್ದಾರೆ.