ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೆವ್ವ ಬಿಡಿಸುವುದಾಗಿ ಮಹಿಳೆಯೊಬ್ಬರಿಗೆ ಅಮಾನುಷವಾಗಿ ಥತಳಿಸಲಾಗಿದ್ದು, ಇದರಿಂದಾಗಿ ತೀವ್ರ ಗಾಯಗೊಂಡ ಮಹಿಳೆ ಸಾವನ್ನಪ್ಪಿದ್ದಾರೆ.
ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆ ಗ್ರಾಮದಲ್ಲಿ ಭಾನುವಾರ ರಾತ್ರಿ ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯನ್ನು ಥಳಿಸಲಾಗಿದೆ. ಗೀತಮ್ಮ(45) ಮೃತಪಟ್ಟ ಮಹಿಳೆ. ದೆವ್ವ ಬಿಡಿಸುವ ನೆಪದಲ್ಲಿ ಹಲ್ಲೆ ನಡೆಸಿದ ಗ್ರಾಮದ ಆಶಾ(35), ಆಕೆಯ ಪ್ರತಿ ಸಂತೋಷ್ ಕುಮಾರ್(37) ಹಾಗೂ ಗೀತಮ್ಮ ಅವರನ್ನು ಇಬ್ಬರ ಬಳಿಗೆ ಕರೆದೊಯ್ದ ಪುತ್ರ ಸಂಜಯ್(20) ಅವರನ್ನು ಹೊಳೆಹೊನ್ನೂರು ಠಾಣೆ ಪೋಲೀಸರು ಬಂಧಿಸಿದ್ದಾರೆ.
ಜಂಬರಗಟ್ಟೆಯ ಆಶಾ ತಮ್ಮ ಮೇಲೆ ಚೌಡೇಶ್ವರಿ ಬಂದಿದ್ದಾಳೆ ಎಂದು 15 ದಿನಗಳಿಂದ ಊರಿನವರನ್ನು ನಂಬಿಸಿದ್ದರು. ಹೀಗಾಗಿ ತನ್ನ ತಾಯಿಯ ಮೈಮೇಲೆ ಆಗಾಗ ದೆವ್ವ ಬರುತ್ತದೆ ಎಂದು ಗೀತಮ್ಮ ಅವರನ್ನು ಪುತ್ರ ಸಂಜಯ್ ಭಾನುವಾರ ರಾತ್ರಿ 9:15 ರ ವೇಳೆಗೆ ಆಶಾ ಮನೆಗೆ ಕರೆದುಕೊಂಡು ಹೋಗಿದ್ದಾನೆ.
ಗೀತಮ್ಮಳ ಮೈಯಲ್ಲಿ ಆತ್ಮ ಸೇರಿಕೊಂಡಿದೆ. ಅದನ್ನು ಹೊರ ಹಾಕುತ್ತೇನೆ ಎಂದು ಆಶಾ ಪೂಜೆ ಮಾಡಿ ದೆವ್ವ ಓಡಿಸುತ್ತೇನೆ ಎಂದು ತಲೆಯ ಮೇಲೆ ಕಲ್ಲು ಹೊರಿಸಿ ಗ್ರಾಮದ ಹೊರಗೆ ಮರವೊಂದರ ಬಳಿಗೆ ಕರೆದೊಯ್ದಿದ್ದಾರೆ. ನಂತರ ಮರದ ಟೊಂಗೆ ಕಿತ್ತುಕೊಂಡು ಮನಬಂದಂತೆ ಥಳಿಸಿದ್ದಾರೆ. ಕಾಲುವೆಯಲ್ಲಿದ್ದ ತಣ್ಣೀರನ್ನು ಮೈಮೇಲೆ ಹಾಕಿದ್ದು ಚಳಿಯಿಂದ ನಡುಗುತ್ತಿದ್ದ ಗೀತಮ್ಮ ಕುಸಿದು ಬಿದ್ದಿದ್ದಾರೆ. ರಾತ್ರಿ 9:15 ರಿಂದ ಬೆಳಗಿನ ಜಾವ 3 ಗಂಟೆಯವರೆಗೆ ಗೀತಮ್ಮ ಅವರನ್ನು ಥತಿಳಿಸಲಾಗಿದ್ದು, ಹಲ್ಲೆಗೊಳಲಾಗಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಹೊಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ದೆವ್ವ ಬಿಡಿಸುವ ನೆಪದಲ್ಲಿ ಕೋಲಿನಿಂದ ಹೊಡೆಯುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಕರಣವನ್ನು ಮುಚ್ಚಿ ಹಾಕಲು ಕೆಲವರು ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.