ಯಾದಗಿರಿ: ಕಲುಷಿತ ನೀರು ಸೇವಿಸಿ ಒಂದೇ ಗ್ರಾಮದ ಮೂವರು ಸಾವನ್ನಪ್ಪಿರುವ ಘೋರ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪಟನಟಗಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಮೂವರು ಕಲುಷಿತ ನೀರು ಸೇವನೆಯಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಹತ್ತು ದಿನಗಳ ಹಿಂದೆ ವಾಂತಿ-ಬೇಧಿಯಿಂದ ಬಳಲುತ್ತಿದ್ದ ಮೂವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಮೂವರು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದರೆ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ್ದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ದೇವಕಮ್ಮ ಹೊಟ್ಟಿ (45), ವೆಂಕಮ್ಮ (60) ಹಾಗೂ ರಾಮಣ್ಣ ಪೂಜಾರಿ (50)ಮೃತ ದುರ್ದೈವಿಗಳು. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.