ಒಂದೇ ಒಂದು ದಿನವೂ ಕೆಲಸಕ್ಕೆ ಬಾರದೆ 12 ವರ್ಷಗಳಿಂದ ಸಂಬಳ ಪಡೆದ ಪೊಲೀಸ್ ಕಾನ್ಸ್ಟೇಬಲ್…!

ಭೋಪಾಲ್: ಮಧ್ಯಪ್ರದೇಶದ ಪೊಲೀಸ್ ಕಾನ್ಸ್ಟೇಬಲ್ ವೊಬ್ಬರು ನೇಮಕವಾದ ದಿನದಿಂದ ಒಂದೇ ಒಂದು ದಿನ ಕೆಲಸಕ್ಕೆ ಹಾಜರಾಗದೆ ಹನ್ನೆರಡು ವರ್ಷಗಳಿಂದ ಬರೋಬ್ಬರಿ 28 ಲಕ್ಷ ರೂಪಾಯಿ ವೇತನ ಪಡೆದುಕೊಂಡಿದ್ದಾರೆ. ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ 2011ರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ನೇಮಕವಾಗಿದ್ದ ವ್ಯಕ್ತಿಯನ್ನು ಸಗರ ಪೊಲೀಸ್ ತರಬೇತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆತ ತರಬೇತಿ ಕೇಂದ್ರಕ್ಕೆ ಹೋಗದೆ ಮನೆಗೆ ಮರಳಿದ್ದ. ಆದರೂ ವೇತನ ಮಾತ್ರ ಪ್ರತಿ ತಿಂಗಳು ಆತನ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ.

ಸಗರ ಪೊಲೀಸ್ ತರಬೇತಿ ಕೇಂದ್ರಕ್ಕೆ ಆತ ತರಬೇತಿಗೆ ಹೋಗಿಲ್ಲ ಮತ್ತು ನಿರಂತರವಾಗಿ ಆತನ ಖಾತೆಗೆ ಸಂಬಳ ಜಮಾ ಆಗುತ್ತಿರುವುದು ಯಾರ ಗಮನಕ್ಕೂ ಬಂದಿಲ್ಲ. ಒಂದು ದಿನವೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡದಿದ್ದರೂ ಇಲಾಖೆಯಲ್ಲಿ ಆತನ ಹೆಸರು ದಾಖಲಾಗಿದೆ. ಮಾತ್ರವಲ್ಲ, 28 ಲಕ್ಷ ರೂ. ವೇತನ ಆತನ ಖಾತೆಗೆ ಜಮಾ ಆಗಿದೆ.

2011ರ ಬ್ಯಾಚ್ ನಲ್ಲಿ ತರಬೇತಿ ಪಡೆದು ಸೇವೆ ಸಲ್ಲಿಸುತ್ತಿರುವವರಿಗೆ ಬಡ್ತಿ ನೀಡಲು ಕಡತ ಪರಿಶೀಲಿಸಿದಾಗ ಈ ಮಾಹಿತಿ ಬಹಿರಂಗವಾಗಿದೆ. ಪೊಲೀಸ್ ಕಾನ್ಸ್ಟೇಬಲ್ ನೋಡಿದ ನೆನಪು ಯಾರಿಗೂ ಇರಲಿಲ್ಲ. ಕೊನೆಗೆ ಹಳೆಯ ಕಡತಗಳನ್ನು ಹುಡುಕಿ ಆತನ ವಿಳಾಸ ಪತ್ತೆ ಮಾಡಲಾಗಿದೆ.

ಠಾಣೆಗೆ ಆತನನ್ನು ಕರೆಸಿ ವಿಚಾರಣೆ ನಡೆಸಿದಾಗ ತನಗೆ ಮಾನಸಿಕ ಕಾಯಿಲೆ ಇದ್ದ ಕಾರಣ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ತಿಳಿಸಿ ವೈದ್ಯಕೀಯ ದಾಖಲೆಗಳನ್ನು ಹಾಜರುಪಡಿಸಿದ್ದಾರೆ. ಅವರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದು, ಭೋಪಾಲ್ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇಲಾಖೆಗೆ 1.5 ಲಕ್ಷ ರೂ. ಮರಳಿಸಿದ್ದು ಉಳಿದ ಹಣವನ್ನು ವೇತನದಿಂದ ಕಡಿತಗೊಳಿಸುವಂತೆ ಮನವಿ ಮಾಡಿರುವುದಾಗಿ ಎಸಿಪಿ ಅಂಕಿತಾ ಕಾಟೇಕರ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read