ಬೀದರ್: ಮಹಿಳೆಯರ ಸುರಕ್ಷತೆಗಾಗಿ ಬೀದರ್ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ರಚಿಸಲಾದ ಮಹಿಳಾ ಪೊಲೀಸ್ ‘ಅಕ್ಕ ಪಡೆ’ಯನ್ನು ರಾಜ್ಯಾದ್ಯಂತ ವಿಸ್ತರಿಸಲು ಕ್ರಮ ಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬೀದರ್ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಶನಿವಾರ ನಡೆದ ಕಲಬುರಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಹಿಳೆಯರ ರಕ್ಷಣೆ, ಸಮಸ್ಯೆ ಬಗೆಹರಿಸಲು ಮಹಿಳಾ ಪೊಲೀಸರ ತಂಡ ಅಕ್ಕ ಪಡೆ ಮಾದರಿಯಾಗಿದೆ. ಬೀದರ್ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಮಹಿಳೆಯರ ಸುರಕ್ಷತೆಗಾಗಿ ರಚಿಸಿದ ಮಹಿಳಾ ಪೊಲೀಸ್ ‘ಅಕ್ಕ ಪಡೆ’ಯನ್ನು ರಾಜ್ಯಾದ್ಯಂತ ವಿಸ್ತರಿಸುವ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.