ರೈತರಿಗೆ ಗುಡ್ ನ್ಯೂಸ್: ಇನ್ನು ಹಗಲಿನಲ್ಲೂ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್

ಹಾಸನ: ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಿ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿ ಎಂದು ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳೊಂದಿಗೆ ಇಂಧನ ಇಲಾಖೆಗೆ ಸಂಬಂಧಪಟ್ಟಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ರೈತರಿಗೆ ಅವಶ್ಯವಿರುವ ಕಡೆಗಳಲ್ಲಿ ಕುಡಿಯುವ ನೀರಿಗೆ ಟ್ರಾನ್ಸ್ ಫಾರ್ಮರ್ ಅಳವಡಿಸಿ ಎಂದು ತಿಳಿಸಿದರು.

ರಾಜ್ಯದಲ್ಲಿ 2500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಟೆಂಡರ್ ಆಹ್ವಾನಿಸಲಾಗಿದ್ದು, ಇದಕ್ಕಾಗಿ ಖಾಸಗಿಯವರು 10 ಸಾವಿರ ಕೋಟಿ ಹಣ ಹೂಡಲು ಸಿದ್ಧರಿದ್ದಾರೆ ಎಂದು ತಿಳಿಸಿದರು.

ಖಾಸಗಿಯವರು ವಿದ್ಯುತ್ ಉತ್ಪಾದನೆ ಮಾಡಲಿದ್ದಾರೆ. ಹಾಗೆಯೇ ದೊಡ್ಡ ದೊಡ್ಡ ಸಬ್ ಸ್ಟೇಷನ್ ಸಹ ಆಗಲಿವೆ. ನಾವು ಅವರಿಂದ ಯೂನಿಟ್‌ಗೆ 3.17 ರೂ. ಹಾಗೂ 2.75 ಪೈಸೆ ನೀಡಿ ಖರೀದಿ ಮಾಡುತ್ತೇವೆ ಎಂದರು.

ಇಂಧನ ಇಲಾಖೆಯಲ್ಲಿ ಎಲ್ಲ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿವೆ. ಯಾವುದೇ ಆರ್ಥಿಕ ಸಮಸ್ಯೆ ಇಲ್ಲ. ಕಳೆದ ವರ್ಷ 1500 ಇಂಜಿನಿಯರ್‌ ಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈವರ್ಷ 3 ಸಾವಿರ ಲೈನ್‌ಮನ್‌ಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಅಧಿಕಾರಿಗಳು ಎಲ್ಲಿಗೆ ಎಷ್ಟು ಟಿಸಿ ಬೇಕು ಎಂಬುದನ್ನು ಪರಿಶೀಲಿಸಿ ನಂತರ ಹಂಚಿಕೆ ಮಾಡಲಿದ್ದಾರೆ. ರೈತರೂ ಸಹ ಅಕ್ರಮ-ಸಕ್ರಮ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸರಿಯಾಗಿ ಹಣ ಕಟ್ಟುತ್ತಿಲ್ಲ. ಸರ್ಕಾರವೇ ಕೆಲ ದಿನಗಳ ಹಿಂದೆ ನಾಲ್ಕೂವರೆ ಲಕ್ಷ ಪಂಪ್‌ಸೆಟ್‌ಗಳನ್ನು ಸಕ್ರಮ ಮಾಡಿದೆ ಎಂದರು.

ಮಲೆನಾಡು ಭಾಗದಲ್ಲಿ ಕರೆಂಟ್ ಸ್ಪರ್ಶದಿಂದ ಕಾಡಾನೆ ದುರಂತ ಸಾವಿಗೀಡಾಗುತ್ತಿರುವ ಬಗ್ಗೆ, ಎಲ್ಲೆಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿವೆಯೋ ಅವುಗಳನ್ನು ಕೂಡಲೇ ಸರಿಪಡಿಸಿ ವನ್ಯ ಜೀವಿಗಳಿಗೆ ತಾಗದಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಇದ್ದ 4 ಲಕ್ಷ ಅಕ್ರಮ ಪಂಪ್ ಸೆಟ್ ಗಳ ಪೈಕಿ 3 ಲಕ್ಷ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದೆ.

ಫೀಡರ್‌ಗಳಿಂದ 500 ಮೀಟರ್ ಒಳಗಿನ ಪಂಪ್‌ಸೆಟ್‌ಗಳಿಗೆ ಇಲಾಖೆಯೇ ಟ್ರಾನ್ಸ್ಫಾರ್ಮರ್ ಒದಗಿಸಲಿದೆ. 500 ಮೀಟರ್ ನಿಂದ ಹೊರಗಿನ ಪಂಪ್ ಸೆಟ್‌ಗಳಿಗೆ ಕುಸುಮ್-ಬಿ ಯೋಜನೆಯಡಿ ಸೋಲಾರ್ ಪಂಪ್ ಸೆಟ್‌ಗಳನ್ನು ಒದಗಿಸಲಾಗುತ್ತದೆ. ಅದೇ ರೀತಿ ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಕೆಗೆ ಕುಸುಮ್-ಸಿ ಯೋಜನೆಯಡಿ ಫೀಡರ್ ಸೌರೀಕರಣ ಮಾಡಲಾಗುತ್ತಿದೆ ಎಂದರು.

ಸರ್ಕಾರ ಕುಸುಮ್-ಸಿ ಯೋಜನೆಯಡಿ ಕೃಷಿ ಪಂಪ್ ಸೆಟ್‌ಗಳ ಫೀಡರ್ ಸೋಲರೈಸೇಷನ್ ಮೂಲಕ 2,400 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಗುರಿ ಹಾಕಿಕೊಂಡಿದೆ. ಇತ್ತೀಚೆಗೆ ಗೌರಿಬಿದನೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಸುಮ್-ಸಿ ಯೋನೆಯಡಿ ಸ್ಥಾಪಿಸಿರುವ ಸೋಲಾರ್ ವಿದ್ಯುತ್ ಘಟಕವನ್ನು ಉದ್ಘಾಟನೆ ಮಾಡಿದ್ದಾರೆ ಎಂದರು.

ಈಗಾಗಲೇ ಸುಮಾರು 200 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ 93 ಸ್ಥಳಗಳಲ್ಲಿ 545 ಮೆ.ವ್ಯಾ. ಸಾಮರ್ಥ್ಯದ ಸೋಲಾರ್ ಘಟಕಗಳು ಚಾಲನೆಗೊಳ್ಳಲಿವೆ. ಇದರಿಂದ ರೈತರಿಗೆ ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸಲು ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 4 ಎಕರೆ ಭೂಮಿ ಅಗತ್ಯವಿದೆ. ಸರ್ಕಾರಿ ಭೂಮಿ ಲಭ್ಯವಿದ್ದರೆ ಅದನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿದ್ದಾರೆ. ಆದರೆ, ಆ ಭೂಮಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಅನ್ನು ಖಾಸಗಿ ವಿದ್ಯುತ್ ಉತ್ಪಾದಕರು ಪಾವತಿಸಬೇಕು. ಆ ಮೊತ್ತವನ್ನು ಜಿಲ್ಲಾಧಿಕಾರಿಗಳ ಬಳಿ ಇಟ್ಟು ಉಪ ಕೇಂದ್ರ ಇರುವ ಗ್ರಾಮದ ಸರ್ಕಾರಿ ಶಾಲೆ, ಅಂಗನವಾಡಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಖಾಸಗಿ ಭೂಮಿಯಾಗಿದ್ದರೆ, ವಿದ್ಯುತ್ ಉತ್ಪಾದನೆ ಗುತ್ತಿಗೆ ಪಡೆದ ಡೆವಲಪರ್‌ಗಳು ಗುತ್ತಿಗೆಗೆ ತೆಗೆದುಕೊಂಡು, ಭೂಮಾಲೀಕರಿಗೆ ಎಕರೆಗೆ ಕನಿಷ್ಠ 25,000 ರೂ. ಪರಿಹಾರ ನೀಡುತ್ತಾರೆ ಎಂದು ಹೇಳಿದರು.

ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಮಾತನಾಡಿ, ರೈತರು ಜಮೀನಿನ ಬಳಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ ಅವರಿಗೆ ರಾತ್ರಿ ವೇಳೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮವಹಿಸುವಂತೆ ತಿಳಿಸಿದರು.

ಶಾಸಕ ಎ.ಮಂಜು ಅವರು ಮಾತನಾಡಿ, ಜಿಲ್ಲೆಯಲ್ಲಿ ಇಲಾಖೆಯಿಂದ ಉತ್ತಮ ಕೆಲಸ ಆಗುತ್ತಿದ್ದರೂ, ಕೆಲವೊಮ್ಮೆ ಅಧಿಕಾರಿಗಳು ಸಂಪರ್ಕಕ್ಕೆ ಸಿಗುವುದಿಲ್ಲ. ಇದರಿಂದ ಸ್ಥಳೀಯ ರೈತರು, ಸಾರ್ವಜನಿಕರು ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.

ಶಾಸಕ ಸಿ.ಎನ್.ಬಾಲಕೃಷ್ಣ ಅವರು ಮಾತನಾಡಿ, ಶ್ರೀನಿವಾಸಪುರಕ್ಕೆ ಹೊಸ ಸಬ್ ಸ್ಟೇಷನ್ ನೀಡುವಂತೆ, ಶ್ರವಣಬೆಳಗೊಳದಲ್ಲಿ ಯು.ಜಿ.ಕೇಬಲ್ ಅಳವಡಿಕೆಗೆ ಸಚಿವರಲ್ಲಿ ಮನವಿ ಮಾಡಿದರು.

ಶಾಸಕ ಹೆಚ್.ಕೆ.ಸುರೇಶ್ ಅವರು ಮಾತನಾಡಿ, ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿದರು.

ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿಯಿಂದ ಜನರಿಗೆ ತೊಂದರೆ ಆಗದಂತೆ ಸಿಂಗಲ್ ಫೇಸ್ ನಲ್ಲಿ ನಿರಂತರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿದರು.

ಶಾಸಕರಾದ ಸಿಮೆಂಟ್ ಮಂಜು ಮಾತನಾಡಿ, ರೈತರು ತಮ್ಮ ವಾಹನದಲ್ಲಿ ಟ್ರಾನ್ಸ್ ಫಾರ್ಮ್ಮರ್ ತೆಗೆದುಕೊಂಡು ಹೋಗುತ್ತಿದ್ದಾರೆ. ಇಲಾಖೆ ವಾಹನದಲ್ಲಿ ಟ್ರಾನ್ಸ್ ಫಾರ್ಮ್ಮರ್ ತೆಗೆದುಕೊಂಡು ಹೋಗಲು ಅಧಿಕಾರಿಗಳು ಕ್ರಮವಹಿಸಿ ಎಂದು ತಿಳಿಸಿದರು.

ಶಾಸಕರಾದ ಸ್ವರೂಪ್ ಪ್ರಕಾಶ್ ಹಾಸನ ನಗರಕ್ಕೆ ಒಂದು ಸಬ್ ಸ್ಟೇಷನ್ ಅಗತ್ಯವಿದೆ ಈ ನಿಟ್ಟಿನಲ್ಲಿ ಹಿಮ್ಸ್ ಆವರಣದಲ್ಲಿ ಸ್ಥಳಾವಕಾಶ ಕಲ್ಪಿಸಿ, ಸಾಲಗಾಮೆ ಹೋಬಳಿಗೆ ಹೊಂದಿಕೊAಡAತೆ ಬಡಾವಣೆಗಳು ಬೆಳೆಯುತ್ತಿರುವುದರಿಂದ ಅಲ್ಲಿಯೂ ಕೂಡ ಸಬ್ ಸ್ಟೇಷನ್ ಬೇಕು ಎಂದು ವಿನಂತಿ ಮಾಡಿದರು.

ಸಂಸದ ಶ್ರೇಯಸ್ ಪಟೇಲ್, ಇಂಧನ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಮತ್ತಿತರರು ಉಪಸ್ಥಿತರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read