ಶಿವಮೊಗ್ಗ : ಭದ್ರಾ ನದಿ ದಂಡೆಯ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ಭದ್ರಾ ಜಲಾಶಯದ ಪ್ರದೇಶದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಒಳಹರಿವಿನ ಪ್ರಮಾಣ 20000-25000 ಕ್ಯೂಸೆಕ್ಸ್ ಇದ್ದು, ಯಾವ ಸಮಯದಲ್ಲಾದರು ಜಲಾಶಯ ಭರ್ತಿಯಾಗುವ ಸಾಧ್ಯತೆ ಇದ್ದು, ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು Spill Way Gate ಮುಖಾಂತರ ನದಿಗೆ ಬಿಡಲಾಗುವುದು ಮತ್ತು ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಪ್ರಕಟಣೆ ಹೊರಡಿಸಲಾಗಿರುತ್ತದೆ.
ಆದರೆ, ಅಚ್ಚುಕಟ್ಟು ವ್ಯಾಪ್ತಿಯ ರೈತರು ಜಲಾಶಯದಲ್ಲಿ ನೀರು ಸಂಗ್ರಹಣೆ ಮಾಡದೇ, ನದಿಗೆ ನೀರು ಬಿಡಲಾಗುತ್ತಿದೆ ಎಂದು ಕಛೇರಿಗೆ ಕರೆ ಮಾಡುತ್ತಿರುತ್ತಾರೆ.
ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನೀರಿನ ಸಂಗ್ರಹಣೆ ಕುರಿತು Rule Curve ಪಾಲನೆ ಮಾಡಲಾಗುತ್ತಿದೆ. Rule Curve ಪ್ರಕಾರ ಜಲಾಶಯದಲ್ಲಿರುವ ನೀರಿನ ಸಂಗ್ರಹ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಾದಲ್ಲಿ, ಹೆಚ್ಚುವರಿ ನೀರನ್ನು ಹೊರಬಿಡಬೇಕಾಗಿರುತ್ತದೆ. ಅದರಂತೆ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಭದ್ರಾ ನದಿಯ ಎಡ ಮತ್ತು ಬಲ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕಾಗಿ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಆರ್. ರವಿಚಂದ್ರ ಕೋರಿರುತ್ತಾರೆ.