ಅಮರಾವತಿ: ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ವಿವಿಧೆಡೆ ಬಾಂಬ್ ಸ್ಫೋಟ ನಡೆಸಿದ್ದ ಪ್ರಮುಖ ಆರೋಪಿಗಳ ಮೇಲೆ ಆಂದ್ರಪ್ರದೇಶದ ಪೊಲೀಸರು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ವಿನಾಶಕಾರಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ಬಂಧಿತ ಇಬ್ಬರು ಶಂಕಿತ ಉಗ್ರರಾದ ಅಬೂಬಕ್ಕರ್ ಸಿದ್ಧಿಕ್ ಹಾಗೂ ಮೊಹಮ್ಮದ್ ಅಲಿ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಐಇಡಿ, ದೇಶದ ವಿವಿಧ ನಗರಗಳ ನಕ್ಷೆ, 20 ಕೆಜಿ ಸೂಟ್ ಕೇಸ್ ಬಾಂಬ್ ಸೇರಿದಂತೆ ಹಲವಾರು ವಿನಾಶಕಾರಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್-ಉಮ್ಮಾ ಜೊತೆ ಸಂಪರ್ಕ ಹೊಂದಿದ್ದ ಇಬ್ಬರು ಶಂಕಿತ ಉಗ್ರರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು. ಶೋಧದ ವೇಳೆ ಉಗ್ರ ಅಬೂಬಕರ್ ಪತ್ನಿ ಸಾಯಿರಾ ಬಾನು, ಮೊಹಮ್ಮದ್ ಅಲಿ ಪತ್ನಿ ಶೇಖ್ ಶಮೀಮ್ ರಂಪಾಟ ನಡೆಸಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಅಬೂಬಕ್ಕರ್ ಹಾಗೂ ಮೊಹಮ್ಮದ್ ಅಲಿ ಸ್ಥಳೀಯ ಮಹಿಳೆಯರನ್ನೇ ವಿವಾಹವಾಗಿ ಕಳೆದ 20 ವರ್ಷಗಳಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ರಾಯಚೋಟಿಯಲ್ಲಿ ವಾಸವಾಗಿದ್ದರು. ಆರೋಪಿಗಳ ವಿರುದ್ಧ ರಾಯಚೋಟಿಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ದಾಳಿ ವೇಳೆ ಪತ್ತೆಯಾದ ಅಮೋನಿಯಂ ನೈಟ್ರೇಟ್, ಸ್ಲರಿ ಸ್ಫೋಟಕಗಳು, ಪಿಇಟಿಎನ್ ತುಂಬಿದ 20 ಕೆಜಿಯ ಸೂಟ್ ಕೇಸ್ ಬಾಂಬ್ ಗಳು ಹಾಗೂ ಒಂದು ಸೂಟ್ ಕೇಸ್ ನಲ್ಲಿ ಐಇಡಿ ತುಂಬಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕ್ಅರ್ನೂಲ್ ಡಿಐಜಿ ಡಾ.ಕೋಯ ಪ್ರವೀಣ್ ಮಾಹಿತಿ ನೀಡಿದ್ದಾರೆ.