ಬೆಂಗಳೂರು: ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಿ ಆರ್ ಟಿಓ ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿದ್ದ ಐಷಾರಾಮಿ ಫೆರಾರಿ ಕಾರನ್ನು ಕೊನೆಗೂ ಬೆಂಗಳೂರಿನ ಆರ್ ಟಿ ಓ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿರುವ ಐಷಾರಾಮಿ ಫೆರಾರಿ ಕಾರು ಬೆಂಗಳೂರಿನಲ್ಲಿ ಓಡಾಡಿಕೊಂಡಿತ್ತು. ಜಯನಗರದಲ್ಲಿರುವ ಕಾರಿನ ಮನೆಯ ಮಾಲೀಕರಿಗೆ ಇದೀಗ ಆರ್ ಟಿಓ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಸುಮಾರು ಏಳೂವರೆ ಕೋಟಿ ಮೌಲ್ಯದ ಫೆರಾರಿ ಕಾರು ಬೆಂಗಳೂರಿನ ಲಾಲ್ ಬಾಗ್ ಬಳಿ ತೆರಳುತ್ತಿದ್ದ ಆರ್ ಟಿ ಓ ಅಧಿಕಾರಿಗಳು ಹಿಡಿದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾಲೀಕ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಿ ಓಡಾಡುತ್ತಿರುವುದು ಖಚಿತವಾಗಿದೆ. ಕಾರನ್ನು ವಶಕ್ಕೆ ಪಡೆದಿರುವ ಆರ್ ಟಿಓ ಅಧಿಕಾರಿಗಳು ಇಂದು ಸಂಜೆಯೊಳಗೆ 1.58 ತೆರಿಗೆ ಪಾವತಿಸಿ ಕಾರು ಪಡೆದುಕೊಳ್ಳುವಂತೆ ಡೆಡ್ ಲೈನ್ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ 20 ಲಕ್ಷ ತೆರಿಗೆ ಪಾವತಿಸಿ 2023ರ ಸೆಪ್ಟೆಂಬರ್ ನಿಂದಲೂ ಕರ್ನಾಟಕದಲ್ಲಿ ಅನಧಿಕೃತವಾಗಿ ಈ ಕಾರು ಓಡಾಡುತ್ತಿದೆ ಎಂದು ಆರ್ ಟಿಓ ಅಧಿಕಾರಿಗಳು ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಲಾಲ್ ಬಾಗ್ ಬಳಿ ಕಾರು ಓಡಾಡುತ್ತಿದ್ದ ವೇಳೆ ಕಾರನ್ನು ಸೀಜ್ ಮಾಡಲಾಗಿದೆ. ಜಯನಗರದ 5 ನೇ ಬ್ಲಾಕ್ ನಲ್ಲಿರುವ ಕಾರಿನ ಮಾಲೀಕನ ಮನೆಯ ಮುಂದೆಯೇ ಕಾರನ್ನು ನಿಲ್ಲಿಸಲಾಗಿದ್ದು, ಸದ್ಯ ಆರ್ ಟಿಓ ಸುಪರ್ದಿಯಲ್ಲಿ ಕಾರಿದೆ. ಕಾರು ಮಾಲೀಕ ತೆರಿಗೆ ಪಾವತಿಗೆ ಕಾಲಾವಕಾಶ ಕೇಳಿರುವ ಹಿನ್ನೆಲೆಯಲ್ಲಿ ಇಂದು ಸಂಜೆಯವರೆಗೆ ಡೆಡ್ ಲೈನ್ ನೀಡಲಾಗಿದ್ದು, 1.58 ಕೋಟಿ ತೆರಿಗೆ ಪಾವತಿಸಿ ಕಾರು ಬಿಡಿಸಿಕೊಳ್ಳುವಂತೆ ಸೂಚಿಸಲಾಗಿದೆ.