ಹಾಸನ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವಿನ ಸರಣಿ ಮುಂದುವರೆದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳುತ್ತಿದ್ದ ವೃದ್ಧೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಅರೆಕೆರೆ ಗ್ರಾಮದ ದೇವಮ್ಮ (72) ಹೃದಯಾಘಾತದಿಂದ ಮೃತಪಟ್ಟವರು. ದೇವಮ್ಮ ಅವರಿಗೆ ಎದೆನೋವು ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದ ದೇವಮ್ಮ, ಮನೆಗೆ ವಾಪಸ್ ಆಗುತ್ತಿದ್ದರು.
ಬೆಂಗಳೂರಿನಿಂದ ಅರೆಕೆರೆ ಗ್ರಾಮಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆಯೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.