ಹಾವೇರಿ: ಕೆಲಸದ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿಯನ್ನು ಕರೆತಂದು ರೂಮಿನಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡುತ್ತಿದ್ದ ಮಹಿಳೆಗೆ ಧರ್ಮದೇಟು ನೀಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ನಡೆದಿದೆ.
ಲಕ್ಕವ್ವ ಎಂಬ ಮಹಿಳೆ 14 ವರ್ಷದ ಬಾಲಕಿಯನ್ನು ಕೂಡಿ ಹಾಕಿ ಹಿಂಸಿಸುತ್ತಿದ್ದಳು. ರೂಮಿನಲ್ಲಿ ಮಂಚದ ಕೆಳಗೆ ಕೂಡಿ ಹಾಕಿ ಚಿತ್ರಹಿಂಸೆ ನೀಡುತ್ತಿದ್ದಳು. ವಿಷಯ ತಿಳಿದ ಗ್ರಾಮಸ್ಥರು ಮಹಿಳೆಯ ಮನೆಗೆ ಧಾವಿಸಿ ಮಹಿಳೆಗೆ ಧರ್ಮದೇಟು ನೀಡಿದ್ದಾರೆ.
ನೊಂದ ಬಾಲಕಿಯರು, ಅನಾಥರು, ಮನೆಬಿಟ್ಟು ಬಂದ ಬಾಲಕಿಯರನ್ನೇ ಟಾರ್ಗೆಟ್ ಮಡುತ್ತಿದ್ದ ಲಕ್ಕವ್ವ, ಬಾಲಕಿಯರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಮನೆಗೆ ಕರೆದೊಯ್ದು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದಳು. ಇಲ್ಲವೇ ಮದುವೆ ಮಾಡುವ ನೆಪದಲ್ಲಿ ಹಣ ಪಡೆಯುತ್ತಿದ್ದಳು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹುಬ್ಬಳ್ಳಿ, ಹಾವೇರಿ, ದಾವಣಗೆರೆ ಸೇರಿದಂತೆ ಬಸ್ ನಿಲ್ದಾಣಗಳಲ್ಲಿ ಓಡಾಡುತ್ತಿದ್ದ ಒಂಟಿ ಬಾಲಕಿಯರನ್ನು ಪರಿಚಯಿಸಿಕೊಂಡು ಅವರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ ಮನೆಗೆ ಕರೆತಂದು ಈ ರೀತಿ ಮಾಡುತ್ತಿದ್ದಳು. ಕೆಲ ದಿನಗಳ ಹಿಂದೆ ಚಿಕ್ಕಮಗಳೂರು ಮೂಲದ ಓರ್ವ ಅಪ್ರಾಪ್ತ ಬಾಲಕಿಯನ್ನು ಮನೆಗೆ ಕರೆತಂದಿದ್ದ ಲಕ್ಕವ್ವ, ಬಾಲಕಿಗೆ ಚಿತ್ರಹಿಂಸೆ ನೀಡಿದ್ದಳು. ಬಾಲಕಿ ಮಹಿಳೆಯಿಂದ ತಪ್ಪಿಸಿಕೊಂಡು ಓಡಿದ್ದಾಳೆ. ಈ ವೇಳೆ ಗಲಾಟೆ ಮಾಡಿ ಬಾಲಕಿಗೆ ಹುಚ್ಚು ಹಿಡಿದಿದೆ ಎಂದು ಡ್ರಾಮ ಮಾಡಿದ್ದಳು. ನೊಂದ ಬಾಲಕಿ ಗ್ರಾಮಸ್ಥರ ಮುಂದೆ ತನ್ನ ನೋವು ತೋಡಿಕೊಂಡಿದ್ದಾಳೆ. ಅಲ್ಲದೇ ತನ್ನನ್ನು ರಕ್ಷಿಸುವಂತೆ ಕೇಳಿದ್ದಾಳೆ. ಈ ವೇಳೆ ಗ್ರಾಮಸ್ಥರು 112 ಸಹಾಯವಾಣಿಗೆ ಕರೆಮಾಡಿ ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಿದ್ದರು. ಇದೀಗ ಮತ್ತೋರ್ವ ಬಾಲಕಿಯನ್ನು ಕರೆತಂದಿರುವ ಮಹಿಳೆ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದ್ದಳು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಹಿಳೆ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.