ಶ್ರೀನಗರ: ಹಿಂದೂಗಳ ಪವಿತ್ರ ಅಮರನಾಥ ಯಾತ್ರೆಗೆ ಇಂದು ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಚಾಲನೆ ನೀಡಿದ್ದಾರೆ.
ಇಂದು ಜಮ್ಮುವಿನ ಭಗವತಿ ನಗರದಲ್ಲಿ 5880 ಭಕ್ತರಿದ್ದ ಮೊದಲ ಶಿಬಿರಕ್ಕೆ ಧ್ವಜ ಹಾರಿಸುವ ಮೂಲಕ ಅಮರನಾಥ ಯಾತ್ರೆಗೆ ಬಿಗಿ ಭದ್ರತೆಯೊಂದಿಗೆ ಚಾಲನೆ ನೀಡಲಾಯಿತು. ಅಮರನಾಥ ಯಾತ್ರೆ ನಾಳೆ ಅಧಿಕೃತವಾಗಿ ಆರಂಭಗೊಳ್ಳಲಿದೆ.
ಜುಲೈ 3ರಂದು ನಾಳೆ ಬಾಲ್ಟಾನ್ ಮತ್ತು ಪಹಲ್ಗಾಮ್ ಮಾರ್ಗಗಳಿಂದ ಯಾತ್ರೆ ಹೊರಡಲಿದೆ. ಆಗಸ್ಟ್ 7ರವರೆಗೆ 38 ದಿನಗಳ ಕಾಲ ಅಮರನಾಥ ಯಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಥುವಾದ ಲಖನ್ ಪುರದಿಂದ ಅಮರನಾಥ ಗುಹೆಯವರೆಗೆ ಸುಮಾರು 1 ಲಕ್ಷ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಮರನಾಥ ಯಾತ್ರೆಯ ಮಾರ್ಗದಿದ್ದಕ್ಕೂ ಜಮ್ಮು-ಕಾಶ್ಮೀರ ಸರ್ಕಾರ ಸಿಆರ್ ಪಿಎಫ್ ಹಾಗೂ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದೆ.
ಸೂಕ್ಷ್ಮ ಪ್ರದೇಶಗಲಲ್ಲಿ ವಿಶೇಷ ನಿಗಾ ವಹಿಸಲಾಗಿದ್ದು, ಗಸ್ತು ಹೆಚ್ಚಿಸಲಾಗಿದೆ. ಅಮರನಾಥ ಯಾತ್ರಿಕರಿಗೆ ವಸತಿ, ಕುಡಿಯುವ ನೀರು ಹಾಗೂ ಆಹಾರದಲ್ಲಿ ಯಾವುದೇ ಸಮಸ್ಯೆಗಳಾಗದಂತೆ ಹಾಗೂ ವಿದ್ಯುತ್ ವ್ಯವಸ್ಥೆಗಳನ್ನು ಮಾಡಲಾಗಿದೆ.